ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದಲ್ಲಿ ಭಾರೀ ಭ್ರಷ್ಟಾಚಾರ, ಅವ್ಯವಹಾರ ಪತ್ತೆ: ಲಕ್ಷಾಂತರ ರೂ.ಗಳ ಅನಧಿಕೃತ ವ್ಯವಹಾರಗಳು: ಬರ್ಖಾಸ್ತುಗೊಳಿಸಿದ ಆಡಳಿತ ಸಮಿತಿ ಹೊಣೆಯೆಂದು ಆರೋಪ

ಕುಂಬಳೆ: ವ್ಯಾಪಾರಿಗಳ ಬಿಸ್ನೆಸ್ ಅಗತ್ಯಗಳಿಗೆ ಆರ್ಥಿಕ ಸಹಾಯ ದೊರಕಿಸುವ ಗುರಿಯೊಂದಿಗೆ 1993 ಜೂನ್ 5ರಂದು ಕಾರ್ಯಾರಂಭ ಗೊಂಡ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘ ನಿಯಮಿತ ನಂಬ್ರ 187ರಲ್ಲಿ ಸಹಕಾರಿ ಇಲಾಖೆ ನಡೆಸಿದ ತನಿಖೆಯಲ್ಲಿ ಭಾರೀ ಭ್ರಷ್ಟಾಚಾರ ಹಾಗೂ ಕಾನೂನು ಉಲ್ಲಂಘನೆ ಪತ್ತೆಯಾಗಿದೆ. ಈ ಕುರಿತಾಗಿ ಆಡಳಿತ ಸಮಿತಿ ಸದಸ್ಯರು ಹಾಗೂ ಕಾರ್ಯದರ್ಶಿಯೊಂದಿಗೆ ಸಹಕಾರಿ ಜೋಯಿಂಟ್ ರಿಜಿಸ್ಟ್ರಾರ್ ಸ್ಪಷ್ಟೀಕರಣ ಕೇಳಿದ್ದಾರೆ. ಈ ತಿಂಗಳ 19ರಂದು ನೇರವಾಗಿ ಅಥವಾ ಲಿಖಿತವಾಗಿ ಸ್ಪಷ್ಟೀಕರಣ ನೀಡಬೇಕೆಂದು ನೋಟೀಸ್ನಲ್ಲಿ ತಿಳಿಸಲಾಗಿದೆ.
ಸಹಕಾರಿ ಇಲಾಖೆ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾದ ಕಾನೂನು ವಿರುದ್ಧ ಕ್ರಮಗಳು ಹಾಗೂ ಭ್ರಷ್ಟಾಚಾರಗಳ ಕುರಿತಾದ ವರದಿಯನ್ನು ಆಡಳಿತ ಸಮಿತಿ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಆಡಳಿತ ಸಮಿತಿ ಹೊಣೆಗಾರಿಕೆಯಾಗಿರುವ ಭ್ರಷ್ಟಾಚಾರದಲ್ಲಿ ಸದಸ್ಯರು ಕೂಡಾ ಭಾಗಿಯಾಗಿರುವುದಾಗಿ ಸಹಕಾರಿ ಇಲಾಖೆ ಪತ್ತೆಹಚ್ಚಿದೆ. ಸಂಘದ 115ನೇ ನಂಬ್ರದ ಸದಸ್ಯನಾದ ಸುಕುಮಾರನ್ ತಿಳಿಯದೆ ಅವರ ಹೆಸರಲ್ಲಿ 2018 ಡಿಸೆಂಬರ್ 31ರಂದು 2 ಲಕ್ಷ ರೂಪಾಯಿ ಸಾಲ ತೆಗೆಯಲಾಗಿದೆ. ಈ ಬಗ್ಗೆ ಸುಕುಮಾರನ್ ನಡೆಸಿದ ತನಿಖೆಯಲ್ಲಿ ಸಾಲ ತೆಗೆದಿರುವುದು ಪಿಗ್ಮಿ ಏಜೆಂಟ್ ದಾಮೋದರ ಎಂದು ತಿಳಿದು ಬಂದಿದೆ. ಆ ಸಾಲಕ್ಕೆ ಜಾಮೀನು ನಿಂತಿರುವುದು 233ನೇ ನಂಬ್ರದ ಸದಸ್ಯ ಪಿ.ಕೆ. ಜಲಜಾಕ್ಷಿ ಹಾಗೂ 153ನೇ ನಂಬ್ರದ ಸದಸ್ಯ ಹಂಸ ಎಂಬಿವರಾಗಿದ್ದಾರೆAದು ತಿಳಿದು ಬಂದಿದೆ. ಈ ಕುರಿತಾಗಿ ಸುಕುಮಾರನ್ ಸಹಕಾರಿ ಇಲಾಖೆಗೆ ದೂರು ನೀಡಿದ್ದು, ಇದರಿಂದ ಇಲಾಖೆ ನಡೆಸಿದ ತನಿಖೆಯಲ್ಲಿ ವಿಷಯ ಸರಿಯೆಂದು ತಿಳಿದು ಬಂದಿದೆ. ತನಿಖಾ ತಂಡ ಪಿಗ್ಮಿ ಏಜೆಂಟ್ ದಾಮೋದರನ್ ಜೊತೆ ಪ್ರಕರಣ ಕುರಿತು ವಿಚಾರಿಸಿದೆ. ಈ ವೇಳೆ ಸುಕುಮಾರನ್ ಸಾಲ ತೆಗೆದು ಹಣವನ್ನು ತನಗೆ ನೀಡಿರುವುದಾಗಿಯೂ ಆ ಮೊತ್ತವನ್ನು ಮರಳಿ ಪಾವತಿಸಿದರೆ ಸಮಸ್ಯೆ ಮುಗಿಯುವುದಿಲ್ಲವೇ ಎಂದು ದಾಮೋದರನ್ ತನಿಖಾ ತಂಡದೊAದಿಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಜಾಮೀನು ನಿಂತ ವ್ಯಕ್ತಿಗಳನ್ನು ತನಿಖಾ ತಂಡ ಹೇಳಿಕೆ ಸಂಗ್ರಹಕ್ಕಾಗಿ ಬರುವಂತೆ ತಿಳಿಸಿದರೂ ಅವರಿಬ್ಬರೂ ಹಾಜರಾಗಲಿಲ್ಲ. ಸಂಘದ ಆಡಳಿತ ಸಮಿತಿ ಸಭೆಯಲ್ಲಿ ಸದಸ್ಯನಾದ ವಿಕ್ರಂ ಪೈ ಮಾತನಾಡಿ, ಮರ್ಚೆಂಟ್ ವೆಲ್ಫೇರ್ ಸಂಘದಲ್ಲಿ ವ್ಯಾಪಾರಿಗಳಿಗೆ ಸುರಕ್ಷತೆಯಿಲ್ಲ. ಅದು ಅವರನ್ನು ನಷ್ಟದತ್ತ ಕೊಂಡೊಯ್ಯುತ್ತಿದೆ ಯೆಂದು ತಿಳಿಸಿದ್ದರು. ಅವರ ಹೇಳಿಕೆ ಆಡಳಿತಗಾರರಲ್ಲಿ ರೋಷಕ್ಕೆ ಕಾರಣ ವಾಯಿತು. ಇದರಿಂದ ಭ್ರಷ್ಟಾಚಾರಕ್ಕೆ ಸಹಕರಿಸಲು ತಾನಿಲ್ಲವೆಂದು ತಿಳಿಸಿದ ಅವರು 2023 ಆಗಸ್ಟ್ 16ರಂದು ಆಡಳಿತ ಸಮಿತಿಗೆ ರಾಜೀನಾಮೆ ನೀಡಿದ್ದರು. ಸೊಸೈಟಿಯಲ್ಲಿ ನಡೆಯುವ ವ್ಯಾಪಾರಿ ವಿರುದ್ಧ ಕ್ರಮಗಳ ಕುರಿತು ತನಿಖೆ ನಡೆಸಬೇಕೆಂದು ಸಹಕಾರಿ ಇಲಾಖೆಯ ಉನ್ನತ ಅಧಿಕಾರಿಗಳಲ್ಲಿ ಅವರು ಆಗ್ರಹಿಸಿದ್ದರು. ಅಲ್ಲದೆ ನ್ಯಾಯಾಲಯವನ್ನು ಸಮೀಪಿಸಿದ್ದರು. ಬಳಿಕ ನಡೆಸಿದ ತನಿಖೆ ಯಲ್ಲಿ ಬೆಚ್ಚಿ ಬೀಳಿಸುವ ವಂಚನೆಗಳನ್ನು ಸಹಕಾರಿ ಇಲಾಖೆ ಪತ್ತೆಹಚ್ಚಿದೆ.
ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲೇ ಯಾವುದಾದರೂ ಸಹಕಾರಿ ಸಂಘ ಅಥವಾ ಬ್ಯಾಂಕ್ಗಳು ಸಾಲ ಮಂಜೂರು ಮಾಡುತ್ತವೆಯೇ? ಆದರೆ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಂಘ ಅದರ 428ನೇ ನಂಬ್ರದ ಸದಸ್ಯ ಅಬ್ದುಲ್ ರಶೀದ್ ಹಾಗೂ 429ನೇ ನಂಬ್ರದ ರುಶೈದ್ ಕೆ. ಅವರಿಗೆ 2022 ಜೂನ್ 4ರಂದು ಆಡಳಿತ ಸಮಿತಿ ಸಾಲ ಮಂಜೂರು ಮಾಡಿತ್ತು. ಅದನ್ನು ತಿಳಿದ ಅಬ್ದುಲ್ ರಶೀದ್ 2022 ಜೂನ್ 16ರಂದು, ರುಶೈದ್ 2022 ಜೂನ್ 21ರಂದು ಅರ್ಜಿ ಸಲ್ಲಿಸಿದ್ದಾರೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಎರಡು ವಾರಗಳ ಮೊದಲೇ ಸಂಘ ಸಾಲ ಮಂಜೂರು ಮಾಡಿರುವುದು ಹೇಗೆಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಸಹಕಾರಿ ಇಲಾಖೆ ನಡೆಸಿದ ತನಿಖೆಯಲ್ಲಿ ಸಾಲಕ್ಕಿರುವ ಅರ್ಜಿ ಹಾಗೂ ಮಿನಿಟ್ಸ್ ಬುಕ್ನಲ್ಲಿ ತಿದ್ದುಪಡಿ ಪತ್ತೆಯಾಗಿದೆ. ಅನಂತರ ಸಾಲ ಪಡೆದ ಅಬ್ದುಲ್ ರಶೀದ್, ರುಶೈದ್ ಜಾಮೀನು ನಿಂತ ಪ್ರದೀಪ್ ಶರ್ಮ ಹಾಗೂ ಮುಹಮ್ಮದ್ ರಿಸಾನ್ರಲ್ಲಿ ಸ್ಪಷ್ಟೀಕರಣ ಕೇಳಿದ್ದಾರೆ. ಇದರಂತೆ ಪ್ರದೀಪ್ ಶರ್ಮ ಸಹಕಾರಿ ಜೋಯಿಂಟ್ ರಿಜಿಸ್ಟ್ರಾರ್ ಮುಂದೆ ಹಾಜರಾದರು. ಅಬ್ದುಲ್ ರಶೀದ್ 2 ಲಕ್ಷ ರೂಪಾಯಿ ಸಾಲ ತೆಗೆಯಲು 16-6-2022ರಲ್ಲಿ ತಾನು ಜಾಮೀನು ನಿಂತಿರುವುದಾಗಿ ಅವರು ತಿಳಿಸಿದರು. ಆದರೆ ಅನಂತರ ಸಾಲವನ್ನು 3 ಲಕ್ಷ ರೂಪಾಯಿಗೇರಿಸಿರುವುದಾಗಿ ಅವರು ಪುರಾವೆ ಸಹಿತ ತಿಳಿಸಿದರು. ಸಾಲ ನೀಡುವಾಗ ಕಡತದಲ್ಲಿ 2 ಲಕ್ಷ ರೂಪಾಯಿಯೆಂದು ಬರೆದಿರುವುದಾಗಿ ಅವರು ಜೋಯಿಂಟ್ ರಿಜಿಸ್ಟ್ರಾರ್ಗಳಲ್ಲಿ ತಿಳಿಸಿದರು. ಇತರರು ಹೇಳಿಕೆ ನೀಡಲು ಹಾಜರಾಗಿಲ್ಲ. ಈ ಮಧ್ಯೆ ಸಂಘದ ಅಧ್ಯಕ್ಷ ಎಂ. ಅಬ್ಬಾಸ್ರ ನಿರ್ದೇಶಕ ಸ್ಥಾನವನ್ನು ಸಹಕಾರಿ ಇಲಾಖೆ ಅಸಿಂಧುಗೊಳಿಸಿತ್ತು.

Leave a Reply

Your email address will not be published. Required fields are marked *

You cannot copy content of this page