ಕುಂಬಳೆ ಶಾಂತಿಪಳ್ಳದಲ್ಲಿ ಜನರ ನೆಮ್ಮದಿ ಕೆಡಿಸುತ್ತಿರುವ ತ್ಯಾಜ್ಯ: ನಾಗರಿಕರು ಸ್ಕ್ವಾಡ್ ರೂಪೀಕರಿಸಿ ಮತ್ತೆ ರಂಗಕ್ಕೆ
ಕುಂಬಳೆ: ಈ ಹಿಂದೆ ನಾಗರಿಕರು ಕಠಿಣ ಕ್ರಮಗಳೊಂದಿಗೆ ರಂಗಕ್ಕಿಳಿದ ಹಿನ್ನೆಲೆಯಲ್ಲಿ ಶಾಂತಿಪಳ್ಳ-ಭಾಸ್ಕರನಗರ ಮಧ್ಯೆ ತ್ಯಾಜ್ಯ ಸಮಸ್ಯೆ ದೂರವಾಗಿತ್ತು. ಆದರೆ ಇದೀಗ ಮತ್ತೆ ತ್ಯಾಜ್ಯ ಸಮಸ್ಯೆ ಎದುರಾಗಿದ್ದು, ಇದು ಸಾರ್ವಜನಿಕರ ನೆಮ್ಮದಿ ಕೆಡಿಸತೊಡಗಿದೆ.
ರಾತ್ರಿ ಹೊತ್ತಿನಲ್ಲಿ ವಾಹನಗಳಲ್ಲಿ ತಲುಪಿ ಇಲ್ಲಿನ ರಸ್ತೆ ಬದಿ ತ್ಯಾಜ್ಯ ಎಸೆದು ಪರಾರಿಯಾಗುತ್ತಿರುವ ಕೃತ್ಯ ತೀವ್ರಗೊಂಡಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ನಿನ್ನೆ ಸಂಜೆ ವರೆಗೆ ಶುಚಿಯಾಗಿದ್ದ ರಸ್ತೆ ಬದಿಯಲ್ಲಿ ಇಂದು ಬೆಳಿಗ್ಗೆ ತ್ಯಾಜ್ಯ ರಾಶಿಯೇ ಕಂಡುಬರುತ್ತಿದೆ. ಔಷಧಿ, ಮಾತ್ರೆ ಮೊದಲಾದವುಗಳು ರಸ್ತೆ ಬದಿ ಕಂಡುಬಂದಿರುವ ತ್ಯಾಜ್ಯದಲ್ಲಿ ಒಳಗೊಂಡಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಈ ಹಿಂದೆ ಇದೇ ರೀತಿ ರಸ್ತೆ ಬದಿ ತ್ಯಾಜ್ಯ ಎಸೆಯುವುದು ತೀವ್ರಗೊಂಡಿತ್ತು. ಅದರ ವಿರುದ್ಧ ನಾಗರಿಕರು ಸ್ಕ್ವಾಡ್ ರೂಪೀಕರಿಸಿ ರಾತ್ರಿ ಹೊತ್ತಿನಲ್ಲಿ ಕಾವಲು ಕುಳಿತಿದ್ದರು. ಇದರಿಂದ ಇಲ್ಲಿ ತ್ಯಾಜ್ಯ ಎಸೆಯುವುದು ಕಡಿಮೆಯಾಗಿತ್ತು. ಇದೀಗ ಮತ್ತೆ ತ್ಯಾಜ್ಯ ಎಸೆಯುವ ಕೃತ್ಯ ತೀವ್ರಗೊಂಡಿದೆ. ಇದರ ವಿರುದ್ಧ ಇಂದಿನಿಂದಲೇ ರಾತ್ರಿ ಗಸ್ತು ನಡೆಸುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ. ಇದೇ ವೇಳೆ ರಸ್ತೆ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕೆಂದೂ ನಾಗರಿಕರು ಒತ್ತಾಯಿಸುತ್ತಿದ್ದಾರೆ.