ಕುಂಬಳೆ ಸಿಎಚ್‌ಸಿಯ ಡಯಲಿಸಿಸ್ ಕೇಂದ್ರ ಸಂದಿಗ್ಧತೆಯಲ್ಲಿ
ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆಗಳ ಸಹಾಯದೊಂದಿಗೆ ತಾಲೂಕು ಆಸ್ಪತ್ರೆಗಿಂತ ಕೆಳಗಿನ ಆರೋಗ್ಯ ಕೇಂದ್ರಗಳಲ್ಲಿ ಹೊಸ ಡಯಾಲಿಸಿಸ್ ಯೂನಿಟ್ ಸ್ಥಾಪಿಸಲಿರುವ ಅನುಮತಿಯನ್ನು ಸರಕಾರ ರದ್ದುಪಡಿಸುವುದರೊಂದಿಗೆ ಕುಂಬಳೆ ಸಾಮೂಹಿಕ ಆರೋಗ್ಯ ಕೇಂದ್ರ (ಸಿಎಚ್‌ಸಿ)ಕ್ಕೆ ಈ ಹಿಂದೆ ಮಂಜೂರು ಮಾಡಲಾಗಿದ್ದ ಡಯಾಲಿಸಿಸ್ ಕೇಂದ್ರ ಸಂದಿಗ್ಧತೆಯಲ್ಲಿ ಸಿಲುಕಿದೆ. ಇನ್ನು ಮುಂದೆ ಸರಕಾರಿ ತಾಲೂಕು- ಜನರಲ್ ಆಸ್ಪತ್ರೆಗಳಲ್ಲಿ ಮಾತ್ರವೇ ಡಯಾಲಿಸಿಸ್ ಯೂನಿಟ್‌ಗಳನ್ನು ನಡೆಸಲು ಅನುಮತಿ ನೀಡುವುದಾಗಿ ಸರಕಾರ ಘೋಷಿಸಿದೆ. ಆದರೆ ಈ ಹಿಂದೆ ಆರಂಭಿಸಿದ ಯೂನಿಟ್‌ಗಳ ಚಟುವಟಿಕೆ ಮುಂದುವರಿಸಲು ಅನುಮತಿ ಇದೆ ಎಂದೂ ಸರಕಾರ ತಿಳಿಸಿತ್ತು. ಖಾಸಗಿ ಸಂಸ್ಥೆಗಳಲ್ಲೂ, ಮತ್ತಿತರೆಡೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸುವುದರೊಂದಿಗೆ ಹಲವು ಸರಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್ ಸೆಂಟರ್‌ಗಳನ್ನು ಮುಚ್ಚುಗಡೆಗೊಳಿಸಿರುವುದಾಗಿಯೂ, ಇದರಿಂದ ಯಂತ್ರಗಳು ತುಕ್ಕು ಹಿಡಿದು ನಾಶಗೊಳ್ಳುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸುತ್ತಿದೆ. ಇದೇ ವೇಳೆ ಸ್ಥಳೀಯಾಡಳಿತ ಸಂಸ್ಥೆಗಳ ಅಧೀನದಲ್ಲಿರುವ ಡಯಾಲಿಸಿಸ್ ಸೆಂಟರ್‌ಗಳು ದಾನಿಗಳ, ಸಂಘಟನೆಗಳ, ಉದ್ಯಮಿಗಳ ಸಹಾಯದೊಂದಿಗೆ ಕಾರ್ಯಾಚರಿಸುತ್ತಿದೆ. ಎರಡು ವರ್ಷಗಳ ಹಿಂದೆ ಕುಂಬಳೆ ಸಿಎಚ್‌ಸಿಯಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಲು ಅನುಮತಿ ಲಭಿಸಿರುವುದಾಗಿ ಆಸ್ಪತ್ರೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಇದರಂತೆ ಡಾ| ದಿವಾಕರ ರೈ ಮೆಡಿಕಲ್ ಆಫೀಸರ್ ಆಗಿರುವಾಗ ಸಾಮೂಹಿಕ ಆರೋಗ್ಯ ಕೇಂದ್ರದಲ್ಲಿ ಕೊಠಡಿ ಮತ್ತಿತರ ವ್ಯವಸ್ಥೆಗಳನ್ನು ಏರ್ಪಡಿಸಲಾಗಿತ್ತು. ಆದರೆ ಆಸ್ಪತ್ರೆಯ ನವೀಕರಣ ಯೋಜನೆಯ ರೀತಿಯಲ್ಲೇ ಡಯಾಲಿಸಿಸ್ ಕೇಂದ್ರವೂ ಸಂದಿಗ್ಧತೆಯಲ್ಲಿ ಸಿಲುಕಿದೆ.ಖಾಸಗಿ ಆಸ್ಪತ್ರೆಗಳ ಮಧ್ಯಪ್ರವೇಶವೇ ಡಯಾಲಿಸಿಸ್ ಕೇಂದ್ರ ಆರಂಭಿಸದಿರಲು ಕಾರಣವೆಂದು ನಾಗರಿಕರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಅನುಮತಿ ಲಭಿಸಿದ ಡಯಾಲಿಸಿಸ್ ಕೇಂದ್ರವನ್ನು ಸಿಎಚ್‌ಸಿಯಲ್ಲಿ ಆರಂಭಿಸಲು ಅನುಮತಿ ನೀಡಬೇಕೆಂದು ಮೊಗ್ರಾಲ್ ದೇಶೀಯವೇದಿ ಒತ್ತಾಯಿಸಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಟಿ.ಕೆ. ಅನ್ವರ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಎಂ.ಎಂ. ಮೂಸ, ಗಲ್ಫ್ ಪ್ರತಿನಿಧಿ ಎಲ್.ಟಿ. ಮನಾಫ್, ಮುಹಮ್ಮದ್, ಎಂ.ಜಿ.ಎ. ರಹ್ಮಾನ್, ಬಿ.ಎ. ಮುಹಮ್ಮದ್ ಕುಂಞಿ, ಮುಹಮ್ಮದ್ ಅಶ್ರಫ್, ಎಂ.ಎ. ಅಬೂಬಕ್ಕರ್ ಸಿದ್ದಿಕ್, ಎಂ.ಎಂ. ರಹ್ಮಾನ್, ಅಶ್ರಫ್ ಪೆರುವಾಡು, ಮುಹಮ್ಮದ್, ಅಬ್ದುಲ್ಲ ಕುಂಞಿ ನಡುಪ್ಪಳ್ಳ, ಎ.ಎಂ. ಸಿದ್ದೀಕ್ ರಹ್ಮಾನ್, ರಿಯಾಸ್ ಕರೀಂ, ಶರೀಫ್, ಬಿ.ಕೆ. ಅನ್ವರ್, ಎ.ಎಸ್. ಮುಹಮ್ಮದ್ ಕುಂಞಿ, ಕೆ. ಮುಹಮ್ಮದ್ ಕುಂಞಿ ನಾಂಗಿ, ಪಿ.ಎಂ. ಮುಹಮ್ಮದ್ ಕುಂಞಿ ಮಾತನಾಡಿದರು.