ಕೆಎಎಸ್ ಪರೀಕ್ಷೆ: ಅರ್ಜಿ ಸಲ್ಲಿಕೆಯಲ್ಲಿ 3 ಲಕ್ಷದಷ್ಟು ಕುಸಿತ; ಪ್ರಾಥಮಿಕ ಪರೀಕ್ಷೆ ಜೂನ್ 14ರಂದು
ಕಾಸರಗೋಡು: ಇಂಡಿಯನ್ ಅಡ್ಮಿ ನಿಸ್ಟ್ರೇಟಿವ್ ಸರ್ವೀ ಸ್ (ಐಎಎಸ್) ಮಾದರಿಯಲ್ಲಿ ಕೇರಳ ಸರಕಾರ ಆರಂಭಿಸಿರುವ ಕೇರಳ ಅಡ್ಮಿನಿಸ್ಟ್ರೆ ಟಿವ್ ಸರ್ವೀಸ್ (ಕೆಎಎಸ್) ಪರೀಕ್ಷೆಗಾಗಿ ಈ ಬಾರಿ ಅರ್ಜಿ ಸಲ್ಲಿಸಿದವರ ಸಂಖ್ಯೆಯಲ್ಲಿ ಮೂರು ಲಕ್ಷದಷ್ಟು ಕುಸಿತ ಉಂಟಾಗಿದೆ.
ಈ ಪರೀಕ್ಷೆಗಾಗಿ 2019ರಲ್ಲಿ ಹೊರಡಿಸಲಾದ ಮೊದಲು ಅಧಿಸೂಚನೆ ಪ್ರಕಾರ ರಾಜ್ಯದಲ್ಲಿ ಒಟ್ಟಾರೆಯಾಗಿ 5,47,543 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಇದೇ ಪರೀಕ್ಷೆಗಾಗಿ ಈ ಸಲ ಕೇವಲ 2,15,942 ಮಂದಿ ಮಾತ್ರವೇ ಅರ್ಜಿ ಸಲ್ಲಿಸಿದ್ದಾರೆ. ಅಂದರೆ 2019ರೊಂದಿಗೆ ಹೋಲಿಸಿದಾಗ ಈ ಬಾರಿ ಸಲ್ಲಿಸಲಾಗಿರುವ ಅರ್ಜಿದಾರರ ಸಂಖ್ಯೆಯಲ್ಲಿ 3,31,601ರಷ್ಟು ಕುಸಿತ ಉಂಟಾಗಿದೆ. ಗಜೆಟೆಡ್ ಅಲ್ಲದ ಇತರ ಸರಕಾರಿ ಸಿಬ್ಬಂದಿಗಳಿಗಾಗಿರುವ ಸ್ಟ್ರೀಮ್-2 ವಿಭಾಗದಲ್ಲಿ ಕಳೆದ ಬಾರಿ 26,950 ಮಂದಿ ಅರ್ಜಿ ಸಲ್ಲಿಸಿದ್ದರು. ಅದು ಈ ಸಲ 10,724ಕ್ಕೆ ಕುಸಿದಿದೆ. ಅಂದರೆ ಈ ವಿಭಾಗದಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಒಟ್ಟಾರೆಯಾಗಿ 16,226 ಅರ್ಜಿಗಳ ಕುಸಿತ ಉಂಟಾಗಿದೆ.
ಇನ್ನು ಗಜೆಟೆಡ್ ಅಧಿಕಾರಿಗಳಿಗಾಗಿರುವ ಸ್ಟ್ರೀಮ್-3ರ ಪ್ರಕಾರ ಕಳೆದ ಬಾರಿ 2951 ಮಂದಿ ಅರ್ಜಿ ಸಲ್ಲಿಸಿದ್ದರು. ಅದು ಈ ಸಲ ಕೇವಲ 995ಕ್ಕೆ ಕುಸಿದಿದೆ. ಅಂದರೆ 1,956ರಷ್ಟು ಕುಸಿತ ಉಂಟಾಗಿದೆ. ಕೆಎಎಸ್ ಪ್ರಾಥಮಿಕ ಪರೀಕ್ಷೆ ಜೂನ್ 14ರಂದು ನಡೆಯಲಿದೆ.