ಕೇಂದ್ರೀಯ ವಿ.ವಿ ಸಮೀಪ ಸಾಕುನಾಯಿಯನ್ನು ಕಚ್ಚಿ ಕೊಂದ ಚಿರತೆ: ಹೆಜ್ಜೆ ಗುರುತುಗಳು ಪತ್ತೆ; ಜನರು ಭೀತಿಯಲ್ಲಿ
ಕಾಸರಗೋಡು: ಪೆರಿಯ ಕೇಂದ್ರೀಯ ವಿವಿ ಸಮೀಪ ಪ್ರತ್ಯಕ್ಷಗೊಂಡ ಚಿರತೆ ತನ್ನ ಚಟುವಟಿಕೆ ಆರಂಭಿಸಿದೆ. ಸಾಕುನಾಯಿಯನ್ನು ಕಚ್ಚಿ ಕೊಂದ ಸ್ಥಿತಿಯಲ್ಲಿ ಪತ್ತೆಹಚ್ಚಿರುವುದರೊಂದಿಗೆ ಸ್ಥಳೀಯರಲ್ಲಿ ಭೀತಿಯೂ ಆರಂಭವಾಗಿದೆ. ಮಾಹಿತಿ ತಿಳಿದು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಪುಲ್ಲೂರು- ಪೆರಿಯ ಪಂಚಾಯತ್ ಅಧ್ಯಕ್ಷ ಸಿ.ಕೆ. ಅರವಿಂದಾಕ್ಷನ್ ಕೂಡಾ ಸ್ಥಳಕ್ಕೆ ತಲುಪಿದ್ದಾರೆ. ಇಂದು ಮುಂಜಾನೆ ಪುಲ್ಲೂರು- ಪೆರಿಯ ಪಂಚಾಯತ್‌ನ 15ನೇ ವಾರ್ಡ್ ಕಮ್ಮಾಡತ್ ಪಾರದಲ್ಲಿ ಸಾಕು ನಾಯಿಯನ್ನು ಚಿರತೆ ಕೊಂದುಹಾಕಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಸಮೀಪದಿಂದ ಚಿರತೆಯದ್ದೆಂದು ಶಂಕಿಸುವ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಮಂಗಳವಾರ ರಾತ್ರಿ 8.30ರ ವೇಳೆ ಸಮೀಪದ ಚಾಲಿಂಗಾಲ್, ಮೊಟ್ಟದಲ್ಲಿ ವಾಹನ ಪ್ರಯಾಣಿಕರು ಚಿರತೆಯನ್ನು ಕಂಡಿದ್ದರು. ರಾಷ್ಟ್ರೀಯ ಹೆದ್ದಾರಿಯ ಪೂರ್ವಭಾಗದಿಂದ ಪಶ್ಚಿಮಕ್ಕೆ ಚಿರತೆ ಓಡಿತ್ತು. ಅದರ ಬಳಿಕ ಪರಿಸರ ನಿವಾಸಿಗಳು ಭೀತಿಗೊಂಡಿದ್ದರು. ಈ ಮಧ್ಯೆ ಇಂದು ಬೆಳಿಗ್ಗೆ ಕಮ್ಮಾಡತ್ ಪಾರದಲ್ಲಿ ಸಾಕುನಾಯಿಯನ್ನು ಕೊಂದಿರುವುದು ಕಂಡು ಬಂದಿದೆ.
ಕಮ್ಮಾಡತ್‌ಪಾರದ ಸಮೀಪ ಪ್ರದೇಶವಾದ ಮೀಂಙೋತ್ ಹಾಗೂ ತಟ್ಟುಮ್ಮಲ್‌ನಲ್ಲಿ ಕೆಲವು ದಿವಸಗಳ ಹಿಂದೆ ಚಿರತೆಯನ್ನು ಕಂಡಿದ್ದು, ಬೀದಿ ನಾಯಿಗಳನ್ನು ಕಚ್ಚಿದ ಘಟನೆಗಳು ನಡೆದಿತ್ತು.