ಕೊಲೆ ಪ್ರಕರಣದ ಆರೋಪಿಯನ್ನು ತಲೆಕಡಿದು ಕೊಲೆಗೈದ ಪ್ರಕರಣ: ವಿಚಾರಣೆ ಪೂರ್ಣ
ಕಾಸರಗೋಡು: ಕೊಲೆ ಪ್ರಕರಣದ ಆರೋಪಿಯನ್ನು ತಲೆ ಕಡಿದು ಬರ್ಭರವಾಗಿ ಕೊಲೆಗೈದ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದಲ್ಲಿ ಪೂರ್ಣಗೊಂಡಿದೆ. ಆ ಹಿನ್ನೆಲೆಯಲ್ಲಿ ಪ್ರಕರಣದ ತೀರ್ಪು ಶೀಘ್ರ ಹೊರಬರಲಿದೆ.
ಕುಂಬಳೆ ಸಮೀಪದ ಪೆರೋಳ್ ಪೊಟ್ಟೋಡಿಮೂಲೆ ವೀಟಿಲ್ನ ಮುಹಮ್ಮದ್ ಕುಂಞಿ ಹಾಜಿ ಎಂಬವರ ಪುತ್ರ ಅಬ್ದುಲ್ ಸಲಾಂ (22) ಕೊಲೆಗೈಯ್ಯಲ್ಪಟ್ಟ ಪ್ರಕರಣ ಇದಾಗಿದೆ. ಈ ಕೊಲೆ ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋ ಪಿಗಳಿದ್ದಾರೆ.
೨೦೧೨ ಎಪ್ರಿಲ್ ೩೦ರಂದು ಈ ಕೊಲೆ ನಡೆದಿದೆ. ಅಂದು ಸಂಜೆ ಕುಂಬಳೆ ಮೊಗ್ರಾಲ್ ಮಾಳಿಯಂಗರ ಕೋಟಾದ ನಿರ್ಜನ ಹಿತ್ತಿಲಲ್ಲಿ ಅಬ್ದುಲ್ ಸಲಾಂನನ್ನು ತಲೆ ಕಡಿದು ಕೊಲೆಗೈಯ್ಯಲಾಗಿತ್ತು. ತಲೆ ಮತ್ತು ದೇಹ ಬೇರ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿತ್ತು. ಕೊಲೆ ನಡೆದ ವೇಳೆ ಅಬ್ದುಲ್ ಸಲಾಂನ ಜತೆಗಿದ್ದ ಸ್ನೇಹಿತ ನೌಶಾದ್ (28)ನನ್ನು ಅಕ್ರಮಿಗಳು ಇರಿದು ಗಂಭೀರ ಗಾಯಗೊಳಿಸಿದ್ದಾರೆ. ಗಾಯ ಗೊಂಡ ನೌಶಾದ್ನನ್ನು ಆಂಬುಲೆನ್ಸ್ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಆಂಬುಲೆನ್ಸ್ ಮತ್ತು ಕಾರು ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಮಾಳಂಗೈಯ ಯೂಸುಫ್ ಹಾಜಿ ಎಂಬವರ ಪತ್ನಿ ಸುಲೈಖಾ (60) ಮತ್ತು ಮೊಮ್ಮಗಳು ಮರಿಯಾಂ ಮುಫೀದಾ (17) ಸಾವನ್ನಪ್ಪಿದ್ದರು. ಮಾತ್ರವಲ್ಲ ಇತರ ಮೂವರು ಗಾಯಗೊಂಡಿದ್ದರು.
ಕೊಲೆಗೈಯ್ಯಲ್ಪಟ್ಟ ಅಬ್ದುಲ್ ಸಲಾಂ ಕುಂಬಳೆ ಮತ್ತು ಕಾಸರ ಗೋಡು ಪೊಲೀಸ್ ಠಾಣೆಗಳಲ್ಲಿ ದಾಖಲುಗೊಂಡಿರುವ ಹಲವು ಪ್ರಕರಣಗಳ ಆರೋಪಿಯಾಗಿದ್ದನು. ಕುಂಬಳೆ ಪಂಚಾಯತ್ ಮಾಜಿ ಸದಸ್ಯ ಬಿ. ಎ. ಮುಹಮ್ಮದ್ರ ಪುತ್ರ ಪೇರಾಲ್ ಪೊಟ್ಟೋಡಿಯ ಶೆರೀಫ್ ಎಂಬ ಯುವಕನನ್ನು ಕೊಲೆಗೈದ ಪ್ರಕರಣ ಹಾಗೂ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ವಾಹನವೊಂದಕ್ಕೆ ಕಿಚ್ಚಿರಿಸಿದ ಪ್ರಕರಣದಲ್ಲೂ ಅಬ್ದುಲ್ ಸಲಾಂ ಆರೋಪಿಯಾಗಿದ್ದನು. ಪರೋಲ್ ಪೊಟ್ಟೋರಿಯ ಶೆರೀಫ್ನನ್ನು 2014 ಮಾರ್ಚ್ ತಿಂಗಳಲ್ಲಿ ಕೊಲೆಗೈಯ್ಯಲಾಗಿತ್ತು. ಆ ಪ್ರಕರಣದಲ್ಲಿ ಈತ ನಾಲ್ಕನೇ ಆರೋಪಿಯಾಗಿದ್ದನು.
ಅಬ್ದುಲ್ ಸಲಾಂನನ್ನು ಕೊಲೆಗೈದ ದಿನದ ಹಿಂದಿನ ದಿನದಂದು ಮುಂಜಾನೆ ಆತನ ನೇತೃತ್ವದ ತಂಡ ಮಾಂಙಾಮುಡಿ ಸಿದ್ದಿಕ್ ಎಂಬಾತನ ಮನೆಗೆ ನುಗ್ಗಿ ದಾಳಿ ನಡೆಸಿತ್ತೆಂದು ಅದಕ್ಕೆ ಪ್ರತೀಕಾರವಾಗಿ ಆರೋಪಿಗಳು ಸಲಾಂನನ್ನು ಕೊಲೆಗೈದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಅಂದು ಕುಂಬಳೆ ಪೊಲೀಸ್ ಠಾಣೆಯ ಸಿಐ ಆಗಿದ್ದು, ಈಗ ಬೇಕಲ ಡಿವೈಎಸ್ಪಿಯಾಗಿರುವ ವಿ.ವಿ. ಮನೋಜ್ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿತ್ತು. ಕೊಲೆಗೆ ಬಳಸಿದ ರಕ್ತಸಿಕ್ತ ತಲ್ವಾರು ಮತ್ತು ಕೊಡಲಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.