ಕೊಳತ್ತೂರಿನಿಂದ ಸೆರೆಹಿಡಿದ ಚಿರತೆಯನ್ನು ಬೆಳ್ಳೂರು-ಎಣ್ಮಕಜೆ ಪಂ. ವ್ಯಾಪ್ತಿಯಲ್ಲಿ ಬಿಟ್ಟಿರುವುದಾಗಿ ಆರೋಪ; ಚಿರತೆ ಸೆರೆಗೆ ಒತ್ತಾಯಿಸಿ ಡಿಎಫ್‌ಒ ಕಚೇರಿಯಲ್ಲಿ ಬೆಳ್ಳೂರು ಪಂ. ಜನಪ್ರತಿನಿಧಿಗಳು, ನಾಗರಿಕರಿಂದ ಧರಣಿ
ಮುಳ್ಳೇರಿಯ: ಕೊಳತ್ತೂರು ಆಲವುಂಗಾಲ್‌ನಿಂದ ಅರಣ್ಯ ಅಧಿಕಾರಿಗಳು ಗೂಡು ಸ್ಥಾಪಿಸಿ ಸೆರೆಹಿಡಿದ ಚಿರತೆಯನ್ನು ಬೆಳ್ಳೂರು-ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಜನವಾಸ ಕೇಂದ್ರದಲ್ಲಿ ಬಿಡಲಾಗಿದೆ ಎಂಬ ಆರೋಪವುಂಟಾಗಿದೆ. ಅರಣ್ಯ ಅಧಿಕಾರಿಗಳ ಈ ಕ್ರಮವನ್ನು ಪ್ರತಿಭಟಿಸಿ ಬೆಳ್ಳೂರು ಪಂಚಾಯತ್ ಅಧ್ಯಕ್ಷ ಎಂ. ಶ್ರೀಧರರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ನಾಗರಿಕರು ಡಿಎಫ್‌ಒ ಕಚೇರಿಯಲ್ಲಿ ನಿನ್ನೆ ಧರಣಿ ನಡೆಸಿದರು. ಡಿಎಫ್‌ಒ ಕೆ. ಅಶ್ರಫ್ ಧರಣಿ ನಿರತರೊಂದಿಗೆ ಚರ್ಚೆ ನಡೆಸಿದ್ದು, ಈ ವೇಳೆ ಚಿರತೆಯನ್ನು ಆ ಪ್ರದೇಶದಿಂದ ಸೆರೆಹಿಡಿಯಬೇಕೆಂಬ ಬೇಡಿಕೆಯನ್ನು ಪ್ರತಿಭಟನೆಗಾರರು ಮುಂದಿರಿಸಿದರು. ಅಲ್ಲದೆ ಚಿರತೆಯನ್ನು ಸೆರೆಹಿಡಿಯು ವವರೆಗೆ ಅರಣ್ಯ ಇಲಾಖ ಪಂಚಾಯತ್‌ನ ೧೨ ಕಿಲೋ ಮೀಟರ್ ಉದ್ದದ ಅರಣ್ಯ ಗಡಿ ಪ್ರದೇಶದಲ್ಲಿ ೨೪ ಗಂಟೆ ಕಾಲ ಪಟ್ರೋಲಿಂಗ್ ನಡೆಸಬೇಕೆಂದು ಒತ್ತಾಯಿಸಿದರು. ಬೆಳ್ಳೂರು ಪಂಚಾ ಯತ್‌ನಲ್ಲಿ ಚಿರತೆ ಮನುಷ್ಯರು ಅಥವಾ ವನ್ಯ ಮೃಗಗಳ ಮೇಲೆ ದಾಳಿ ನಡೆಸಿದರೆ ಅದನ್ನು ಸೆರೆಹಿಡಿಯು ವವರೆಗೆ ಆರ್‌ಆರ್‌ಟಿ (ಕ್ಷಿಪ್ರ ಕಾರ್ಯಾಚರಣೆ ಪಡೆ) ಪಟ್ರೋಲಿಂಗ್ ನಡೆಸುವುದಾಗಿ ರೇಂಜ್ ಆಫೀಸರ್ ಸಿ.ವಿ. ವಿನೋದ್ ಕುಮಾರ್ ಲಿಖಿತವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ರಾತ್ರಿ ೯ಗಂಟೆಗೆ ಪ್ರತಿಭಟನೆ ಕೊನೆಗೊಳಿಸಲಾಯಿತು.
ಇದೇ ವೇಳೆ ಚಿರತೆಯನ್ನು ಬೆಳ್ಳೂರು ಎಣ್ಮಕಜೆ ಪಂಚಾಯತ್‌ಗಳ ಗಡಿ ಪ್ರದೇಶವಾದ ಬಂಟಾಜೆ ಮೀಸಲು ರಕ್ಷಿತಾರಣ್ಯದಲ್ಲಿರುವ ಜಾಂಬ್ರಿ ಗುಹೆ ಸಮೀಪ ಚಿರತೆಯನ್ನು ಬಿಟ್ಟಿರುವುದಾಗಿ ಧರಣಿ ನಿರತರು ಆರೋಪಿಸಿದ್ದಾರೆ.
ಚಿರತೆಯನ್ನು ನಾಟೆಕಲ್ಲು, ಬೆಳ್ಳೂರು ಮೂಲಕ ವಾಹನದಲ್ಲಿ ಸಾಗಿಸಿರುವುದಕ್ಕೆ ಇತರ ಪುರಾವೆಗಳಾಗಿ ಸಿಸಿ ಟಿವಿ ದೃಶ್ಯಗಳನ್ನು ಮುಂದಿರಿಸಿದ್ದಾರೆ.
ಪಂಚಾಯತ್ ಅಧ್ಯಕ್ಷರೊಂದಿಗೆ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಚಂದ್ರ ಶೇಖರ ರೈ, ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಜಯಾನಂದ ಕುಳ, ಪ್ರಶಾಂತ್ ಭಟ್ ಮೊದಲಾದವರು ಡಿಎಫ್‌ಒ ರೊಂದಿಗೆ ಚರ್ಚೆ ನಡೆಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್, ಶಾಸಕ ಎನ್.ಎ. ನೆಲ್ಲಿಕುನ್ನು ಕೂಡಾ ಡಿಎಫ್‌ಒ ಕಚೇರಿಗೆ ತಲುಪಿ ಜನವಾಸ ಕೇಂದ್ರದಲ್ಲಿ ಚಿರತೆಯನ್ನು ಬಿಟ್ಟಿದ್ದರೆ ಕೂಡಲೇ ಸೆರೆಹಿಡಿಯಬೇಕೆಂದು ಆಗ್ರಹಪಟ್ಟರು. ಇದೇ ವೇಳೆ ಚಿರತೆಯನ್ನು ಜನವಾಸವಿರುವ ಪ್ರದೇಶದಲ್ಲಿ ಬಿಡಲಾಗಿದೆಯೆಂದು ವರದಿಯಾದ ಹಿನ್ನೆಲೆಯಲ್ಲಿ ಆ ಪ್ರದೇಶದ ಜನರು ಆತಂಕದಲ್ಲಿದ್ದಾರೆ.