ಕ್ರಿಸ್ಮಸ್: ಕಾರ್ಯಾಚರಣೆ ತೀವ್ರಗೊಳಿಸಿದ ಅಬಕಾರಿ ತಂಡ; ಗಾಂಜಾ, ಮದ್ಯ, ಹುಳಿರಸ ವಶ

ಕಾಸರಗೋಡು: ಕ್ರಿಸ್ಮಸ್ ಹಾಗೂ ಹೊಸವರ್ಷ ನಿಕಟವಾಗುತ್ತಿರು ವಂತೆಯೇ ಹೊಗಡೆಯಿಂದ ಜಿಲ್ಲೆಗೆ ಅಕ್ರಮ ಮದ್ಯ, ಸ್ಪಿರಿಟ್ ಹಾಗೂ ಇನ್ನಿತರ ಮಾದಕ ದ್ರವ್ಯಗಳು ಹರಿದು ಬರುತ್ತಿರುವ ಹಾಗೂ ಕಳ್ಳಭಟ್ಟಿ ಸಾರಾಯಿ ನಿರ್ಮಾಣ ಹೆಚ್ಚಾಗುತ್ತಿರುವ ಸಾಧ್ಯತೆಯನ್ನು ಗಮನಿಸಿ ಅದನ್ನು ಮಟ್ಟಹಾಕಲು ಅಬಕಾರಿ ಇಲಾಖೆ ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಇದರಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ  ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಗಳಲ್ಲಾಗಿ ಗಾಂಜಾ, ಅಕ್ರಮ ಸಾರಾಯಿ ಹಾಗೂ ಹುಳಿರಸ ಇತ್ಯಾದಿಗಳನ್ನು ವಶಪಡಿಸಿಕೊಂಡಿದೆ.

ಇದರಂತೆ ನೀಲೇಶ್ವರ ರೇಂಜ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಎನ್. ವೈಶಾಖ್‌ರ ನೇತೃತ್ವದ ಅಬಕಾರಿ ತಂಡ ತೃಕ್ಕರಿಪುರ ಕೋಯಂಕರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 12 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಇದಕ್ಕೆ ಸಂಬಂಧಿಸಿ ಅದನ್ನು ಕೈವಶವಿರಿಸಿಕೊಂಡಿದ್ದ ಬಿಹಾರ ರಾಜ್ಯದ ಅರಾರಿಯ ಜಿಲ್ಲೆಯ ಖುವಾರಿಯಾ ಪಂಚಾಯತ್‌ನ   ನಿವಾಸಿ ಗಫಾರ್ ಅಸ್ಸಾರಿ (26) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೀಲೇಶ್ವರ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಅನೀಶ್ ಕುಮಾರ್ ಕೆ.ಯು.ರ ನೇತೃತ್ವದ ಅಬಕಾರಿ ತಂಡ ವೆಳ್ಳರಿಕುಂಡ್ ತಾಲೂಕಿನ ವೆಸ್ಟ್ ಎಳೇರಿ ಗ್ರಾಮದ ಕೊಟ್ಟಮಲ ಎಂಬಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ಲಿ ಕಳ್ಳಭಟ್ಟಿ  ಸಾರಾಯಿ ತಯಾರಣೆಗಾಗಿ ನಿರ್ಮಿಸಿ  ಬಚ್ಚಿಡಲಾಗಿದ್ದ 40 ಲೀಟರ್ ವಾಶ್ (ಹುಳಿರಸ)ವನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮಾತ್ರವಲ್ಲ ವೆಳ್ಳರಿಕುಂಡ್ ತಾಲೂಕಿನ ಮಾಲೋಂ ಗ್ರಾಮದ ವಣ್ಣಾಲಕುನ್ನು ಎಂಬಲ್ಲಿಗೆ ಹೊಸದುರ್ಗ ಎಕ್ಸೈಸ್ ಸರ್ಕಲ್ ಎಕ್ಸೈಸ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ರಾಜೀವನ್ ಎಂ.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಆ ಜಾಗದಲ್ಲಿ ಬಚ್ಚಿಡಲಾಗಿದ್ದ 40 ಲೀಟರ್ ಹುಳಿರಸ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಚೆರ್ಕಳದಲ್ಲಿ ಜನವಾಸವಿಲ್ಲದ ಸ್ಥಳದಲ್ಲಿ ಬಚ್ಚಿಡಲಾಗಿದ್ದ 5.75 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ರೇಂಜ್ ಎಕ್ಸೈಸ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್), ರಾಜೀವನ್ ಎ.ವಿ. ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಇದೇ ರೀತಿ ಹೊಸದುರ್ಗ ಪೇಟೆಯಲ್ಲಿ ಹೊಸದುರ್ಗ ಎಕ್ಸೈಸ್ ರೇಂಜ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಪ್ರಮೋದ್ ಕುಮಾರ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 2.7 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದ್ಕಕೆ ಸಂಬಂಧಿಸಿ ಹೊಸದುರ್ಗ ಶ್ರೀಕೃಷ್ಣಮಂದಿರ ಬಳಿ ನಿವಾಸಿ ಶಿವಾನಂದ (54) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page