ಗರ್ಭಿಣಿ ಆತ್ಮಹತ್ಯೆಗೈದ ಪ್ರಕರಣ: ಪತಿ, ಅತ್ತೆಗೆ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಗರ್ಭಿಣಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ ಮತ್ತು ಅತ್ತೆಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾ ಧೀಶರಾದ ಎ. ಮನೋಜ್ ಅವರು ಐಪಿಸಿಯ ವಿವಿಧ ಸೆಕ್ಷನ್‌ಗಳ ಪ್ರಕಾರ ಕಠಿಣ ಸಜೆ ಮತ್ತು ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಯುವತಿಯ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್ ಪ್ರಕಾರ ಪತಿ ಮೊಗ್ರಾಲ್ ಪುತ್ತೂರು ಬೆದ್ರಡ್ಕ ಹೌಸಿಂಗ್ ಕಾಲನಿಯ ಸಾಧಿಕ್ ಸುಲೈಮಾನ್ (೩೬)ನಿಗೆ ನ್ಯಾಯಾಲಯ ಆರು ವರ್ಷ ಕಠಿಣ ಸಜೆ ಮತ್ತು ಎರಡು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.  ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಇದೇ ರೀತಿ ಸಾಧಿಕ್ ಸುಲೈಮಾನ್‌ನ ತಾಯಿ ಆಸ್ಯುಮ್ಮ (೫೨)ಳಿಗೆ ನ್ಯಾಯಾಲಯ ಎರಡು ವರ್ಷ ಕಠಿಣ ಸಜೆ ಮತ್ತು ಎರಡು ಲಕ್ಷ ರೂ. ಜುಲ್ಮಾನೆ ವಿಧಿಸಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆಕೆ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸ ಬೇಕಾಗಿದೆಯೆಂದೂ ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ. ಆರೋಪಿ ಸಾಧಿಕ್ ಸುಲೈಮಾನ್‌ನ ಪತ್ನಿ ಮೊಗ್ರಾಲ್ ಪುತ್ತೂರು ಕಂಬಾರು ನಿವಾಸಿ ಐದು ತಿಂಗಳ ಗರ್ಭಿಣಿಯಾಗಿದ್ದ ಆಯಿಷತ್ ಫಾಯಿಸ (೨೪) ಎಂಬಾಕೆ ೨೦೧೬ ಅಕ್ಟೋಬರ್ ೨೧ರಂದು ನೇಣು ಬಿಗಿದು ಆತ್ಮಹತ್ಯೆಗೈದಿದ್ದಳು. ಅದಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ಆರೋಪಿಗಳಿಬ್ಬರ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ಮತ್ತು ಗೃಹ ಕಿರುಕುಳ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಕಾಸರಗೋಡು ಡಿವೈಎಸ್ಪಿಯಾಗಿದ್ದ ಎಂ.ವಿ. ಸುಕುಮಾರನ್ ಈ ಬಗ್ಗೆ ತನಿಖೆ ನಡೆಸಿ ನ್ಯಾಯಾ ಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಪಬ್ಲಿಕ್ ಪ್ರೋಸಿಕ್ಯೂಟರ್ ಇ. ಲೋಹಿತಾಕ್ಷನ್ ನ್ಯಾಯಾಲಯದಲ್ಲಿ ವಾದಿಸಿದ್ದರು.

RELATED NEWS

You cannot copy contents of this page