ಗರ್ಭಿಣಿ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಗ್ಗೆ ನಿಗೂಢತೆ
ಕೊಲ್ಲಂ: ಗರ್ಭಿಣಿಯಾದ ಯುವತಿ ನಿಗೂಢವಾಗಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ತೃಕಣ್ಣಾಪುರ ಶಹಾನ್ ಮಂಜಿಲ್ನ ಫಾತಿಮ (22) ಮೃತಪಟ್ಟ ಯುವತಿ. ಕೊಲ್ಲಂ, ಇಯಾಂಗೋಡ್ ಚೆರು ತೋಡ್ ಸಮೀಪದ ದೀಪು ಎಂಬ ಯುವಕನ ಮನೆ ಯಲ್ಲಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವತಿಯ ಹಣೆಯಲ್ಲಿ ಆಳವಾದ ಗಾಯವಿದ್ದು, ಘಟನೆಯಲ್ಲಿ ನಿಗೂಢತೆಯಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆಲಪ್ಪುಳ ನಿವಾಸಿಯಾದ ಫಾತಿಮಳ ವಿವಾಹ ಈ ಮೊದಲೇ ನಡೆದಿತ್ತು. ಈ ಸಂಬಂಧದಲ್ಲಿ ಮೂರು ವರ್ಷ ಪ್ರಾಯದ ಮಗುವಿದೆ. ಬಳಿಕ ಪತಿಯೊಂದಿಗೆ ವಿರಸಗೊಂಡು ಬೇರ್ಪಟ್ಟ ಫಾತಿಮ ಆರು ತಿಂಗಳ ಹಿಂದೆ ದೀಪುನ ಜೊತೆ ವಾಸ ಆರಂಭಿಸಿದ್ದಳು. ಘಟನೆಯಲ್ಲಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.