ಗಲ್ಫ್‌ಗೆ ತೆರಳುವ ಸಿದ್ಧತೆ ಮಧ್ಯೆ ಯುವಕ ರೈಲುಗಾಡಿಯಿಂದ ಹೊರಕ್ಕೆಸೆಯಲ್ಪಟ್ಟು ಮೃತ್ಯು
ಕುಂಬಳೆ: ಗಲ್ಫ್‌ಗೆ ತೆರಳುವ ಅಂಗವಾಗಿ ಸ್ವವಿವರಗಳನ್ನು ಕಳುಹಿಸಿಕೊಡಲೆಂದು ಹೋದ ಯುವಕ ರೈಲುಗಾಡಿಯಿಂದ ಹೊರಕ್ಕೆಸೆಯಲ್ಪಟ್ಟು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಕುಂಬಳೆ ಮುಟ್ಟಂಕುನ್ನಿಲ್ ನಿವಾಸಿ ಅಬ್ದುಲ್ ರಹಿಮಾನ್‌ರ ಪುತ್ರ ಹುಸೈನ್ ಸವಾದ್ (35) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ ವೇಳೆ ಈ ದಾರುಣ ಘಟನೆ ಸಂಭವಿಸಿದೆ.
ಮಂಗಳೂರು ಭಾಗದಿಂದ ಬರುತ್ತಿದ್ದ ರೈಲು ಗಾಡಿಯಲ್ಲಿ ಹುಸೈನ್ ಸವಾದ್ ಪ್ರಯಾಣಿಸುತ್ತಿದ್ದರು. ರೈಲು ಕುಂಬಳೆ ತಲುಪಲು ಕೆಲವೇ ನಿಮಿಷಗಳಿರುವಾಗ ಸವಾದ್ ಬಾಗಿಲಿನ ಸಮೀಪದಲ್ಲಿ ನಿಂತಿದ್ದರೆನ್ನಲಾಗಿದೆ. ರೈಲು ಆರಿಕ್ಕಾಡಿಗೆ ತಲುಪಿದಾಗ ಸವಾದ್ ಹೊರಕ್ಕೆಸೆಯಲ್ಪಟ್ಟಿದ್ದಾರೆ. ಇದನ್ನು ಕಂಡ ಇತರ ಪ್ರಯಾಣಿಕರು ಕೂಡಲೇ ಕುಂಬಳೆ ಪೊಲೀಸರಿಗೆ ಹಾಗೂ ರೈಲ್ವೇ ಪೊಲೀಸರಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿದು ತಕ್ಷಣ ಕುಂಬಳೆ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐ. ಶ್ರೀಜೇಶ್ ಎಂಬಿವರ ನೇತೃತ್ವದಲ್ಲಿ ತಲುಪಿದ ಪೊಲೀಸರು ನಡೆಸಿದ ಶೋಧ ವೇಳೆ ಸವಾದ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನ ರಲ್ ಆಸ್ಪತ್ರೆಗೆ ತಲುಪಿಸಲಾಯಿತು.
ಬಯೋಡಾಟ ಗಲ್ಫ್‌ಗೆ ಕಳುಹಿಸಿಕೊಡಲಿದೆಯೆಂದು ತಿಳಿಸಿ ಸವಾದ್ ಕಾಸರಗೋಡಿಗೆ ತೆರಳಿದ್ದಾರೆನ್ನಲಾಗಿದೆ. ಅನಂತರ ಆ ಸಂಬಂಧ ಕೆಲಸಗಳಿಗಾಗಿ ಮಂಗಳೂರಿಗೆ ತೆರಳಿದ್ದಿರಬಹುದೆಂದು ಅಂದಾ ಜಿಸಲಾಗಿದೆ.
ಮೃತರು ತಾಯಿ ನಫೀಸ, ಸಹೋದರ ನಿಸಾರ್, ಸಹೋದರಿ ಸಬೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.