ಗಲ್ಫ್ ಉದ್ಯಮಿ ಕೊಲೆ: ಆರೋಪಿಗಳ ಶಬ್ದ ಸಂದೇಶ ಪರಿಶೀಲನೆ ನಡೆಸಿದ ಪೊಲೀಸರು

ಕಾಸರಗೋಡು: ಗಲ್ಫ್ ಉದ್ಯಮಿ ಪಳ್ಳಿಕ್ಕರೆ ಪೂಚಕ್ಕಾಡು ಬೈತುಲ್ ಮಂಜಿಲ್‌ನ ಎಂ.ಸಿ. ಅಬ್ದುಲ್ ಗಫೂರ್ ಹಾಜಿ (55)ರಿಂದ ಮಂತ್ರವಾದ ಹೆಸರಲ್ಲಿ 596 ಪವನ್ ಚಿನ್ನ ಪಡೆದ ಬಳಿಕ ಅದನ್ನು ಅವರು ಹಿಂತಿರುಗಿ ಕೇಳಿದಾಗ ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿ ಕಳೆಯುತ್ತಿರುವ ನಾಲ್ವರು ಆರೋಪಿಗಳ ಧ್ವನಿ ಸಂದೇಶಗಳನ್ನು ಪೊಲೀಸರು  ಪರಿಶೀಲನೆ ನಡೆಸಿದ್ದಾರೆ.

ಈ ನಾಲ್ವರು ಆರೋಪಿಗಳನ್ನು ಪ್ರಸ್ತುತ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಸರಗೋಡು ಕ್ರೈಂ ಡಿಟಾಚ್‌ಮೆಂಟ್ ಬ್ಯೂರೋ ಡಿವೈಎಸ್ಪಿ ಕೆ.ಜೆ. ಜೋನ್ಸನ್ ನೇತೃತ್ವದ ಪೊಲೀಸರು ನಿನ್ನೆ ಕಣ್ಣೂರು ಆಕಾಶವಾಣಿ ನಿಲಯಕ್ಕೆ  ಸಾಗಿಸಿ ಆಕಾಶವಾಣಿ ನಿಲಯದ ತಜ್ಞರ ಸಹಾಯದಿಂದ ಆರೋಪಿಗಳ ಧನಿ ಸಂದೇಶ ಪರಿಶೀಲನೆ ನಡೆಸಿದ್ದಾರೆ.

ಅಬ್ದುಲ್ ಗಫೂರ್ ಹಾಜಿಯನ್ನು ಕೊಲೆಗೈಯ್ಯುವ ಮೊದಲು ಹಾಗೂ ಕೊಲೆಯ ನಂತರ ಈ ಪ್ರಕರಣದ ಆರೋಪಿಗಳಾದ ಉದುಮ ಬಾರ ಮೀತಲ್ ಮಾಂಙಾಡ್  ಕಳಕುನ್ನಿನಲ್ಲ್ಲಿ ವಾಸಿಸುತ್ತಿರುವ  ಮೂಲತಃ ಮಧೂರು ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಟಿ.ಎಂ.ಉಬೈಸ್ (ಉಮೈಸ್-32), ಆತನ ಪತ್ನಿ ಮಂತ್ರವಾದಿನಿ ಶಮೀಮ ಕೆ.ಎಚ್ (35), ಪೂಚಕ್ಕಾಡ್‌ನ ಅನ್ಸೀಸ (35) ಮತ್ತು ಮಧೂರು ಕೊಲ್ಯದ ಆಯಿಷ (43) ಎಂಬವರು ಮೊಬೈಲ್ ಫೋನ್ ಮೂಲಕ ಮಾಡಿದ ಕರೆಗಳು, ಶಬ್ದಸಂದೇಶಗಳು, ಲಿಖಿತ ಸಂದೇಶಗಳ ವೀಡಿಯೋ ಇತ್ಯಾದಿ   1.42 ಲಕ್ಷದಷ್ಟು ಸಂದೇಶಗಳನ್ನು ರವಾನಿಸಿದ್ದಾರೆಂಬುವುದನ್ನು ಸೈಬರ್ ಪೊಲೀಸರ ಸಹಾಯದಿಂದ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿತ್ತು. ಅದರಿಂದಾಗಿ ಆ ಸಂದೇಶಗಳನ್ನು ಪರಿಶೀಲಿಸುವ ಸಲುವಾಗಿ ಅವರನ್ನು ತನಿಖಾ ತಂಡ ನಿನ್ನೆ ಆಕಾಶವಾಣಿ ನಿಲಯಕ್ಕೆ ಸಾಗಿಸಿ ಅವರ ಧ್ವನಿ ಪರಿಶೀಲನೆ ನಡೆಸಿದೆ. ಇನ್ನು  ಆರೋಪಿಗಳನ್ನು ತನಿಖೆಯ ಅಂಗವಾಗಿ ಕೊಚ್ಚಿಗೂ ಸಾಗಿಸಿ ಅಲ್ಲಿಂದಲೂ ಮಾಹಿತಿ ಸಂಗ್ರಹ ನಡೆಸಲು ತನಿಖಾ ತಂಡ ತೀರ್ಮಾನಿಸಿದೆ.

ತನಿಖಾ ತಂಡ ಸಲ್ಲಿಸಿದ ಅರ್ಜಿ ಯಂತೆ ಈ ನಾಲ್ವರು ಆರೋಪಿಗಳನ್ನು ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾ ಲಯ ನ್ಯಾಯಾಂಗ ಬಂಧನದಿಂದ ಮತ್ತೆ ಜನವರಿ 25ರ ತನಕ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿದೆ. ತನಿಖೆಗಾಗಿ ಆರೋಪಿಗಳನ್ನು ನ್ಯಾಯಾಲಯ ಈ ಹಿಂದೆಯೂ ಎರಡು ಬಾರಿ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿತ್ತು.

ಇದೇ ವೇಳೆ ಜಾಮೀನು ಕೋರಿ ಆರೋಪಿಗಳು ಸಲ್ಲಿಸಿರುವ  ಅರ್ಜಿಗಳ ಪರಿಶೀಲನೆಯನ್ನು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜನವರಿ 27ಕ್ಕೆ ಮುಂದೂಡಿದೆ.

Leave a Reply

Your email address will not be published. Required fields are marked *

You cannot copy content of this page