ಗಾಳಿಯಡ್ಕ-ಆವಳ ಸಂಪರ್ಕ ರಸ್ತೆ ಹದಗೆಟ್ಟು ಶೋಚನೀಯ: ದುರಸ್ತಿಗೆ ಕ್ರಮವಿಲ್ಲ; ಸಂಚಾರಕ್ಕೆ ಸಮಸ್ಯೆ

ಬಾಯಾರು: ರಸ್ತೆ ಹದಗೆಟ್ಟು ಶೋಚನೀಯಾವಸ್ಥೆಯಿಂದ ಸ್ಥಳೀಯರ ಸಂಚಾರ ದುಸ್ತರವಾಗಿದೆ. ಪೈವಳಿಕೆ ಪಂಚಾಯತ್  ವ್ಯಾಪ್ತಿಯ ೪ನೇ ವಾರ್ಡ್ ಬಾಯಾರು ಸೊಸೈಟಿ ಬಳಿಯಿಂದ ಗಾಳಿಯಡ್ಕ ಶಾಲೆ ತನಕದ ಸುಮಾರು ಒಂದು ಕಿಲೋ ಮೀಟರ್ ರಸ್ತೆ ಅಲ್ಲಲ್ಲಿ ಬೃಹತ್ ಹೊಂಡಗಳುಂಟಾಗಿ ಶೋಚನೀಯಾವಸ್ಥೆಗೆ ತಲುಪಿದೆ. ವಾಹನ ಸಂಚಾರ  ಬಿಟ್ಟು ಸ್ಥಳೀಯರಿಗೆ ನಡೆದಾಡಲು ಸಾಧ್ಯವಾಗದಂತಹ  ಸ್ಥಿತಿ ಉಂಟಾಗಿರುವುದಾಗಿ ಊರವರು ದೂರಿದ್ದಾರೆ. ಆವಳ ಪ್ರದೇಶಕ್ಕೆ ಸಂಪರ್ಕ ರಸ್ತೆ ಇದಾಗಿದ್ದು, ಈ ಪರಿಸರದಲ್ಲಿ ಶಾಲೆ, ವಿಲ್ಲೇಜ್ ಕಚೇರಿ ಹಾಗೂ ಹಲವಾರು ಮನೆಗಳೂ ಇವೆ. ನೂರಾರು ಮಂದಿ ಸಂಚರಿಸುವ ರಸ್ತೆ ಇದಾಗಿದೆ. ಬೇಸಿಗೆಯಲ್ಲಿ  ಹೊಂಡವನ್ನು ಕಾಣಬಹುದಾಗಿದ್ದು, ಈಗ ಹೊಂಡದಲ್ಲಿ ನೀರು ತುಂಬಿ ಹೊಂಡ ತಿಳಿಯದಂತಾಗಿದೆ. ಈ ಪರಿಸರದಲ್ಲಿ ಚರಂಡಿ ಇದ್ದರೂ ನೀರು ಹರಿಯದೆ ರಸ್ತೆಯಲ್ಲಿಯೇ ಕಟ್ಟಿ ನಿಲ್ಲುತ್ತಿದೆ. ಈ ವಾರ್ಡ್‌ನ ಜನಪ್ರತಿನಿಧಿ ಪಂಚಾಯತ್ ಅಧ್ಯಕ್ಷೆಯಾಗಿದ್ದರೂ ಇವರಲ್ಲಿ ಹಲವು ಬಾರಿ ರಸ್ತೆ ದುರಸ್ತಿಗೊಳಿಸಲು  ಆಗ್ರಹಿಸಿದರೂ ಯಾವುದೇ ಪ್ರಯೋಜನ ಉಂಟಾಗಲಿಲ್ಲವೆಂದು ಊರವರು ಆರೋಪಿಸಿದಾರೆ. ಈ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page