ಚಕ್ಕರ ಬಜಾರ್‌ನಲ್ಲಿ ಪೈಂಟ್ ಅಂಗಡಿಗೆ ಬೆಂಕಿ: ತಪ್ಪಿದ ಅನಾಹುತ

ಕಾಸರಗೋಡು: ನಗರದ ಚಕ್ಕರಬಜಾರ್‌ನಲ್ಲಿರುವ ಪೈಂಟ್ ಮಾರಾಟದಂಗಡಿಯಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿದೆ. ಅಗ್ನಿಶಾಮಕದಳ ಸಮಯೋಚಿತವಾಗಿ ತಲುಪಿದ ಹಿನ್ನೆಲೆಯಲ್ಲಿ ಭಾರೀ ದುರಂತ ತಪ್ಪಿಹೋಗಿದೆ. ಎಂ.ಜಿ ರಸ್ತೆಯಲ್ಲಿರುವ ರಶೀದ್ ಎಂಬವರ ಮಾಲಕತ್ವದ  ಕೆ.ಎಚ್. ಟ್ರೇಡರ್ಸ್ ಎಂಬ ಪೈಂಟ್ ಮಾರಾಟದಂಗಡಿಯಲ್ಲಿ ಬೆಂಕಿ ಉಂಟಾಗಿದೆ. ಇಂದು ಮುಂಜಾನೆ ಮೂರೂವರೆ ಗಂಟೆ ವೇಳೆ ಬೆಂಕಿ ಉರಿಯುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ಪೈಂಟ್ ಅಂಗಡಿಯಿಂದ ಬೆಂಕಿ ಹಾಗೂ ಹೊಗೆಯನ್ನು ಗಮನಿಸಿದ್ದು, ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಅವರು ತಲುಪಿ ಗಂಟೆಗಳೊಳಗೆ ಬೆಂಕಿ ನಂದಿಸಿದ ಕಾರಣ ಭಾರೀ ದುರಂತ ತಪ್ಪಿಹೋಗಿದೆ. ಒಂದು ಕೋಟಿ ರೂ.  ಮೌಲ್ಯದ ಪೈಂಟ್ ಸಾಮಗ್ರಿಗಳು ನಾಲ್ಕು ಕೊಠಡಿಗಳಲ್ಲಾಗಿ ಇಲ್ಲಿತ್ತು.

ಶುಕ್ರವಾರ ರಾತ್ರಿ ಅಂಗಡಿ ಮುಚ್ಚುವಾಗ ಶಟರ್ ಹಾಕಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವೆಲ್ಡಿಂಗ್ ಕೆಲಸ ಮಾಡಲಾಗಿತ್ತು. ಈ ವೇಳೆ ಬೆಂಕಿ ಕಿಡಿ ಮರದ ಅಡ್ಡಕ್ಕೆ ಬಿದ್ದಿದ್ದು, ಅದು ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಬಳಿಕ ಮರದ ಅಡ್ಡ ಉರಿದು ಬೆಂಕಿ ವ್ಯಾಪಿಸಿರಬೇಕೆಂದು ಶಂಕಿಸಲಾಗಿದೆ. ಈ ವೇಳೆ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದ ಕಾರಣ ಉಳಿದ ಕಡೆಗೆ ಹರಡುವುದನ್ನು ತಪ್ಪಿಸಲು ಸಾಧ್ಯವಾಗಿದೆ. ದಳದ ಸೀನಿಯರ್  ಫಯರ್ ಆಂಡ್ ರೆಸ್ಕ್ಯೂ ಅಧಿಕಾರಿ ವಿ.ಎನ್. ವೇಣುಗೋಪಾಲರ ನೇತೃತ್ವದಲ್ಲಿ ಅಧಿಕಾರಿಗಳಾದ ಶ್ರೀಕೇಶ್, ಅಖಿಲ್, ಅಶೋಕನ್, ಅಭಿಶಯನ್, ರಾಜು, ಅಜೇಶ್ ಎಂಬಿವರು ಕಾರ್ಯಾಚರಣೆ ನಡೆಸಿದ್ದಾರೆ.

You cannot copy contents of this page