ಚಿನ್ನ ವ್ಯವಹಾರದಿಂದ ಹಣ ನಷ್ಟ: ಮಧ್ಯವರ್ತಿಗಳನ್ನು ಅಪಹರಿಸಿ ಗಂಭೀರ ಹಲ್ಲೆ; ಆರು ಮಂದಿ ಬಂಧನ

ಕಾಸರಗೋಡು: ಹಳೆಯ ಚಿನ್ನ ವ್ಯವಹಾರದಲ್ಲಿ ಹಣ ನಷ್ಟಗೊಂಡ ದ್ವೇಷದಿಂದ 7 ಮಂದಿಯ ತಂಡವೊಂದು ಮಧ್ಯವರ್ತಿಗಳನ್ನು ಅಪಹರಿಸಿ ಪೆರಿಯಾಟಡ್ಕ ಎಂಬಲ್ಲಿನ ಗುಪ್ತ ಕೇಂದ್ರದಲ್ಲಿ ಕೂಡಿಹಾಕಿ ಹಲ್ಲೆಗೈದು ಗಾಯಗೊಳಿಸಿದ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಬೇಕಲ ಪೊಲೀಸರು ಕೂಡಲೇ ಅಲ್ಲಿಗೆ ತಲುಪಿ ಇಬ್ಬರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಸೆರೆಹಿಡಿಯಲಾಗಿದೆ. ಇನ್ನೋರ್ವ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ನೀಲೇಶ್ವರ ಕೊಟಪ್ಪುರದ ಶರೀಫ್ ಇಡಕ್ಕಾವಿಲ್ (40), ಕೋಟ್ಟಯಂ ಕಾಞಿರಪ್ಪಳ್ಳಿ 26ನೇ ಮೈಲಿನ ಟಿ.ಎಂ. ಸಜಿ (40) ಎಂಬಿವರನ್ನು ಪೊಲೀಸರು  ರಕ್ಷಿಸಿದ್ದಾರೆ. ಪಾಲಕ್ಕಾಡ್ ಶ್ರೀಕೃಷ್ಣಪುರಂ ಕಲಸಿ ಎಂಬಲ್ಲಿನ ವಿ. ಅಜಯ ಕುಮಾರ್ (36),  ಪನಯಾಲ್‌ನ ಕೆ.ಎಚ್. ಸಲ್ಮಾನ್ ಫಾರಿಸ್ (22), ನೆಲ್ಲಿಕಟ್ಟೆ ಗ್ರೀನ್ ನಗರ ಶರ್ಮಿಳ ಮಂಜಿಲ್‌ನ ಹಂಸತ್ತುಲ್ ಕರಾರ್ (ಎ.ಜೆ. ಹಂಸ-23), ನೆಲ್ಲಿಕಟ್ಟೆ ನೆಕ್ರಾಜೆ ಜಿಲಾನಿ ಹೌಸ್‌ನ ಎ.ಎಚ್. ಮಾಜಿದ್ (23), ನೆಲ್ಲಿಕಟ್ಟೆ ಮಶರಾ ಮಂಜಿಲ್‌ನ ಎಂ. ಮೊಹಮ್ಮದ್ ಅಶ್ರಫ್ (26), ಪನಯಾರ್ ಚೆರುಂಬಾ ರಿಫಾಯಿ ಕ್ವಾರ್ಟರ್ಸ್‌ನ ಸಿ.ಎಚ್. ಮುಹಮ್ಮದ್ ರಶೀದ್ (25) ಎಂಬಿವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.  ಕಂಡರೆ ಪತ್ತೆಹಚ್ಚಬಹುದಾದ ಇನ್ನೋರ್ವ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ- ಕರ್ನಾಟಕದಲ್ಲಿ ಹಳೆ ಚಿನ್ನ ವ್ಯವಹಾರದಲ್ಲಿ ಶರೀಫ್ ಹಾಗೂ ಸಜಿ  ಮಧ್ಯವರ್ತಿಗಳಾಗಿ   ಬೆಳಗಾವಿಗೆ ತೆರಳಿದ್ದರು. ಅಲ್ಲಿ ಕೇರಳದಿಂದ ಹೋದವರ 7 ಲಕ್ಷ ರೂಪಾಯಿಗಳನ್ನು ಕರ್ನಾಟಕದ ತಂಡ ಲಪಟಾಯಿಸಿತ್ತು. ಆ ಹಣವನ್ನು ಮರಳಿ ವಶಪಡಿಸಲು ಮಧ್ಯವರ್ತಿ ಗಳನ್ನು ಅಪಹರಿಸಿ ಕೊಠಡಿಯೊಂ ದರಲ್ಲಿ ಕೂಡಿಹಾಕಿ ಹಲ್ಲೆಗೈಯ್ಯಲಾಗಿದೆ. ಹಣ ನಷ್ಟಗೊಂಡ ಬಳಿಕ ಬಸ್ಸಿನಲ್ಲಿ ಮಂಗಳೂರಿಗೆ ತಲುಪಿದ ತಂಡದೊಂದಿಗೆ  ಇನ್ನಷ್ಟು ಮಂದಿ ಅವರಿಬ್ಬರನ್ನು ಕಾರಿನಲ್ಲಿ ಅಪಹರಿಸಿ  ಕೊಂಡು ಬಂದಿತ್ತು. ರಾಷ್ಟ್ರೀಯ ಹೆದ್ದಾರಿ ಪೆರಿಯಾಟಡ್ಕ ದಲ್ಲಿ ಟಯರ್ ಅಂಗಡಿ ಸಮೀಪದಲ್ಲಿರುವ ಮೂರಂತಸ್ತಿನ ಕಟ್ಟಡದ ಮೇಲಿರುವ ಕೊಠಡಿಗೆ ಮೊನ್ನೆ ಮುಂಜಾನೆ 3 ಗಂಟೆ ವೇಳೆ  ತಂಡ ತಲುಪಿ  ಬಳಿಕ ಇಬ್ಬರಿಗೆ ಗಂಭೀರವಾಗಿ ಹಲ್ಲೆಗೊಳಿಸಿದೆ. ಕಬ್ಬಿಣದ ಸರಳು ಸಹಿತ ಮಾರಕಾಯುಧಗಳಿಂದ ಹಲ್ಲೆಗೈದಿರುವುದಾಗಿ ಅಪಾಯದಿಂದ ಪಾರಾದವರು ತಿಳಿಸಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ. ತಮಗೆ ನಷ್ಟಗೊಂಡ ಹಣ ಮರಳಿ ಲಭಿಸದಿದ್ದರೆ ಕೊಲ್ಲುವುದಾಗಿಯೂ ತಂಡ ಬೆದರಿಕೆಯೊಡ್ಡಿತ್ತೆನ್ನಲಾಗಿದೆ. ಈಮಧ್ಯೆ ಶನಿವಾರ ಸಂಜೆ ಬೇಕಲ ಪೊಲೀಸರಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರ ದಲ್ಲಿ ಎಸ್.ಐ ಬಾವ ಅಕ್ಕರಕ್ಕಾರನ್ ಹಾಗೂ ತಂಡ ಪೆರಿಯಾಟಡ್ಕಕ್ಕೆ ತಲುಪಿ ಇಬ್ಬರನ್ನು ತಂಡದ ಕೈಯಿಂದ ರಕ್ಷಿಸಿದೆ. ಅಲ್ಲದೆ 6 ಮಂದಿಯನ್ನು ಬಂಧಿಸಿದೆ. ಹಲ್ಲೆಯಿಂದ ಗಾಯಗೊಂಡವರನ್ನು ಉದುಮದ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಗಿದೆ.  ಸೆರೆಗೀಡಾದ ಆರು ಮಂದಿ ಆರೋಪಿಗಳಿಗೆ ಹೊಸದುರ್ಗ ಜ್ಯುಡೀಶಿಯಲ್ ಪ್ರಥಮ ದರ್ಜೆ ನ್ಯಾಯಾಲಯ (ದ್ವಿತೀಯ) ರಿಮಾಂಡ್ ವಿಧಿಸಿದೆ. 

Leave a Reply

Your email address will not be published. Required fields are marked *

You cannot copy content of this page