ಚೆನ್ನೈಗೆ ಹೋದ ಯುವಕ, ಯುವತಿ ರೈಲು ಢಿಕ್ಕಿ ಹೊಡೆದು ಮೃತ್ಯು
ಕಾಸರಗೋಡು: ಮಲಪ್ಪುರಂ ನಿವಾಸಿಯಾದ ಯುವಕ ಹಾಗೂ ಸ್ನೇಹಿತೆಯಾದ ಯುವತಿ ಚೆನ್ನೈಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೆರಿಂದಲ್ಮಣ್ಣ ಪನಂಙಂಙಂರ ರಾಮಪುರಂ ಕಿಳಿಕ್ಕೇದಿಲ್ ಮುಹಮ್ಮದ್ ಶರೀಫ್ (36) , ಕಲ್ಲಿಕೋಟೆ ಮೆಡಿಕಲ್ ಕಾಲೇಜ್ ಸಮೀಪ ಅಂಬಲಕೋತ್ ತರೋಲ್ನ ಪಿ. ಐಶ್ವರ್ಯ (28) ಎಂಬಿವರು ಮೃತಪಟ್ಟವರಾಗಿದ್ದಾರೆ. ಕೆಲಸ ಹುಡುಕಿ ಈ ಇಬ್ಬರು ಚೆನ್ನೈಗೆ ತೆರಳಿದ್ದರೆಂದು ಹೇಳಲಾಗುತ್ತಿದೆ. ಮೊನ್ನೆ ರಾತ್ರಿ ಗುಡುವಾಂಜೇರಿ ರೈಲ್ವೇ ನಿಲ್ದಾಣದಲ್ಲಿ ಇವರನ್ನು ಸ್ವಾಗತಿಸಲು ಮೊಹಮ್ಮದ್ ರಫೀಕ್ ಎಂಬಾತ ತಲುಪಿದ್ದನು. ಈ ಮೂರು ಮಂದಿ ರೈಲು ಹಳಿ ದಾಟುತ್ತಿದ್ದಾಗ ಐಶ್ವರ್ಯ ಹಾಗೂ ಶರೀಫ್ಗೆ ರೈಲು ಢಿಕ್ಕಿ ಹೊಡೆದಿದೆ. ಮೊಹಮ್ಮದ್ ರಫೀಕ್ ಮೊದಲು ಹಳಿ ದಾಟಿದುದರಿಂದ ಆತ ಅಪಾಯದಿಂದ ಪಾರಾಗಿದ್ದಾನೆ. ಶರೀಫ್ ಘಟನಾ ಸ್ಥಳದಲ್ಲೂ, ಐಶ್ವರ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲೂ ಸಾವಿಗೀಡಾಗಿದ್ದಾರೆ.
ಮಾಂಕಾವ್ ಬ್ಲೋಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ. ಮೋಹನ್ದಾಸ್-ಮೆಡಿಕಲ್ ಕಾಲೇಜ್ ಎಚ್ಡಿಎಸ್ ಲ್ಯಾಬ್ ಟೆಕ್ನಿಶೀಯನ್ ರಾಣಿ ದಂಪತಿಯ ಪುತ್ರಿಯಾಗಿದ್ದಾಳೆ ಐಶ್ವರ್ಯ. ಚೆನ್ನೈಯಲ್ಲಿ ಟ್ರಾವಲ್ಸ್ ಮಾಲಕನಾಗಿರುವ ಕಿಳೇಕ್ಕೇದಿಲ್ ಸುಬೈರ್ ಹಾಜಿ-ಖದೀಜ ದಂಪತಿಯ ಪುತ್ರನಾಗಿದ್ದಾನೆ ಮುಹಮ್ಮದ್ ಶರೀಫ್. ಮೃತದೇಹಗಳನ್ನು ಇಂದು ಊರಿಗೆ ತಲುಪಿಸಲಾಗುವುದು.