ಜಿಲ್ಲಾ ಎನ್‌ಫೋರ್ಸ್‌ಮೆಂಟ್ ತಂಡದಿಂದ ವಿವಿಧ ಭಾಗಗಳಲ್ಲಿ ತ್ಯಾಜ್ಯ ತಪಾಸಣೆ: ಪುತ್ತಿಗೆಯಲ್ಲಿ ವ್ಯಾಪಾರ ಸಂಸ್ಥೆಗಳಿಗೆ ದಂಡ
ಕಾಸರಗೋಡು: ನಾಡು ಹಾಗೂ ನಗರವನ್ನು ತ್ಯಾಜ್ಯಮುಕ್ತ ಗೊಳಿಸುವ ಉದ್ದೇಶದಿಂದ ತ್ಯಾಜ್ಯ ಸಂಸ್ಕರಣೆ ವಲಯದ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಗಳೊಂದಿಗೆ ಸ್ಥಳೀ ಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸುತ್ತಿದೆ. ಪುತ್ತಿಗೆ ಪಂಚಾಯತ್‌ನ ಬಾಡೂರು ಪೇಟೆಯಲ್ಲಿ ನಡೆಸಿದ ತಪಾಸಣೆ ಯಲ್ಲಿ ವಾಣಿಜ್ಯ ವ್ಯಾಪಾರ ಸಂಸ್ಥೆಗಳ ಪರಿಸರಗಳಲ್ಲಿ ತ್ಯಾಜ್ಯಗಳನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಸ್ಟೋರ್‌ಗಳು, ಕಾಂಪ್ಲೆಕ್ಸ್ ಎಂಬಿವುಗಳ ಮಾಲಕರಿಗೆ 15,000 ರೂ.ನಂತೆ ದಂಡ ಹೇರಲಾಗಿದೆ.
ಬಾಡೂರಿನಲ್ಲಿ ಬಸ್‌ಗಳನ್ನು ನಿಲುಗಡೆಗೊಳಿಸುವ ಸ್ಥಳದಲ್ಲಿ ಬಸ್ ತೊಳೆದ ಬಳಿಕ ತ್ಯಾಜ್ಯಗಳನ್ನು ರಸ್ತೆ ಬದಿ ಉಪೇಕ್ಷಿಸಿದ ಬಸ್ ಮಾಲಕನಿಗೆ ೫೦೦೦ ರೂ. ದಂಡ ಹೇರಲಾಯಿತು.
ಆಹಾರ ಪದಾರ್ಥಗಳ ಅವಶಿಷ್ಟಗಳು ಸಹಿತ ಜೈವಿಕ ತ್ಯಾಜ್ಯಗಳನ್ನು ಸಂಸ್ಕರಿಸುವುದಕ್ಕೆ ವ್ಯವಸ್ಥೆ ಏರ್ಪಡಿಸದೆ ರಾಶಿ ಹಾಕಿದ್ದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಪಡನ್ನ ಪಂಚಾಯತ್‌ನ ವಿವಿಧ ಕ್ವಾರ್ಟರ್ಸ್ ಮಾಲಕರಿಗೆ 15,000 ರೂ. ದಂಡ ಹೇರಲಾಗಿದ್ದು, ರಿಂಗ್ ಕಂಪೋಸ್ಟ್ ಸ್ಥಾಪಿಸಲು ನಿರ್ದೇಶಿಸಲಾಯಿತು. ಜೈವಿಕ ತ್ಯಾಜ್ಯ ಸಂಸ್ಕರಣೆಗೆ ವ್ಯವಸ್ಥೆ ಯಿಲ್ಲದಿರುವುದು ರಸ್ತೆ ಬದಿ ತ್ಯಾಜ್ಯ ಉಪೇಕ್ಷಿಸುವುದು ಹೆಚ್ಚಾಗಲು ಕಾರಣವಾಗಿದೆ. ತಪಾಸಣಾ ತಂಡದಲ್ಲಿ ಜಿಲ್ಲಾ ಎನ್ ಫೋರ್ಸ್‌ಮೆಂಟ್ ತಂಡದ ಮುಖ್ಯಸ್ಥ ಕೆ.ವಿ. ಮೊಹಮ್ಮದ್ ಮದನಿ, ಪಡನ್ನ ಪಂಚಾಯತ್ ಹೆಲ್ತ್ ಇನ್ಸ್‌ಪೆಕ್ಟರ್ ಕೆ. ರಜೀಶ, ಪುತ್ತಿಗೆ ಪಂಚಾಯತ್ ಕ್ಲರ್ಕ್ ಕೆ. ಸಂದೇಶ್, ಸದಸ್ಯ ಇ.ಕೆ. ಫಾಸಿಲ್ ನೇತೃತ್ವ ನೀಡಿದರು.