ಟೆಂಟ್‌ನೊಳಗೆ ಸಹೋದರರ ಜತೆ ನಿದ್ರಿಸುತ್ತಿದ್ದ ಎರಡು ವರ್ಷದ ಬಾಲಕಿಯ ಅಪಹರಣ
ತಿರುವನಂತಪುರ: ಟೆಂಟ್‌ನೊಳಗೆ ಸಹೋದರರ ಜತೆ ನಿದ್ರಿಸುತ್ತಿದ್ದ ಎರಡು ವರ್ಷದ ಬಾಲಕಿಯನ್ನು ಅಪರಿಚಿತರು ಅಪಹರಿಸಿದ ಘಟನೆ ರಾಜ್ಯ ರಾಜಧಾನಿಯಾದ ತಿರುವನಂತಪುರ ಪಟ್ಟಾದಲ್ಲಿ ನಡೆದಿದೆ.
ಮೂಲತಃ ಬಿಹಾರ ನಿವಾಸಿ ಹಾಗೂ ನಂತರ ಹೈದರಾಬಾದ್‌ಗೆ ವಾಸ ಬದಲಾಯಿಸಿದ್ದ ಅಲೆಮಾರಿ ವಿಭಾಗಕ್ಕೆ ಸೇರಿದ ದಂಪತಿಯ ಪುತ್ರಿಯನ್ನು ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಅಪ ಹರಿಸಿದ್ದಾರೆ. ಪಟ್ಟಾದ ಅಲ್ ಸೈಂಟ್ ಕಾಲೇಜು ಬಳಿಯ ರೈಲು ಹಳಿ ಬಳಿ ನಿರ್ಮಿಸಲಾದ ಟೆಂಟ್‌ನೊಳಗಿನಿಂದ ಬಾಲಕಿಯನ್ನು ಅಪಹರಿಸಲಾಗಿದೆ. ಬಾಲಕಿಯ ಹೆತ್ತವರು ಹಿಂದಿ ಭಾಷೆ ಮಾತ್ರವೇ ಅರಿತವರಾಗಿದ್ದಾರೆ. ಇಂದು ಮುಂಜಾನೆ ಬಾಲಕಿ ನಾಪತ್ತೆಯಾಗಿರುವುದಾಗಿಯೂ ಕಪ್ಪು ಬಣ್ಣದಲ್ಲಿ ಬಿಳಿ ಗೆರೆ ಹೊಂದಿರುವ ಟಿ ಶರ್ಟ್ ಧರಿಸಿದ ಓರ್ವ ಹಾಗೂ ಇನ್ನೋರ್ವ ಅಪರಿಚಿತ ವ್ಯಕ್ತಿ ಟೆಂಟ್ ಬಳಿ ಹಳದಿ ಬಣ್ಣಧ ಸ್ಕೂಟರ್‌ನಲ್ಲಿ ಅತ್ತಿತ್ತ ತಿರುಗಾಡುತ್ತಿದ್ದರೆಂದೂ ಅವರೇ ಬಾಲಕಿಯನ್ನು ಅಪಹರಿಸಿರಬಹುದೆಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಬಾಲಕಿಯ ಸಹೋದರ ಆರೋಪಿಸಿದ್ದಾನೆ.
ರೈಲು ಹಳಿ ಬಳಿಯ ಟೆಂಟ್‌ನೊಳಗೆ ನಾನು ಮತ್ತು ಸಹೋದರಿ ನಿನ್ನೆ ರಾತ್ರಿ ನಿದ್ರಿಸಿದ್ದೆವು. ಟೆಂಟ್‌ನೊಳಗೆ ಸೊಳ್ಳೆ ಬಲೆಯನ್ನೂ ಹಾಕಲಾಗಿತ್ತು. ಬಾಲಕಿ ನಾಪತ್ತೆಯಾದ ವಿಷಯ ಇಂದು ಬೆಳಿಗ್ಗೆ ೧ ಗಂಟೆ ಬಳಿಕವಷ್ಟೇ ನನ್ನ ಗಮನಕ್ಕೆ ಬಂದಿದೆ ಎಂದು ಆತ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಪಟ್ಟಾ ಪೊಲೀಸರು ಈ ಬಗ್ಗೆ ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಸ್ತೆ ಬದಿಗಳಲ್ಲಿ ವ್ಯಾಪಾರ ನಡೆಸಿ ಉಪಜೀವನ ನಡೆಸುತ್ತಿರುವ ಅಲೆಮಾರಿ ವಿಭಾಗಕ್ಕೆ ಸೇರಿದವರಾಗಿದ್ದಾರೆ ಬಾಲಕಿಯ ಹೆತ್ತವರು. ಎರಡು ವಾರಗಳ ಹಿಂದೆಯಷ್ಟೇ ಇವರು ತಿರುವನಂತಪುರಕ್ಕೆ ಬಂದಿದ್ದರು. ನಾವು ಈ ಹಿಂದೆಯೇ ಇಲ್ಲಿಗೆ ಬಂದಿದ್ದೆವು ಅದರಿಂದಾಗಿ ಈ ಪ್ರದೇಶ ಸುಪರಿಚಿತವಾದುದೆಂದು ಬಾಲಕಿಯ ಹೆತ್ತವರು ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ. ಅಪಹರಣ ನಡೆದ ಪ್ರದೇಶಗಳ ಎಲ್ಲಾ ಸಿಸಿ ಟಿವಿ ಕ್ಯಾಮರಾಗಳನ್ನು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದಾರೆ. ರೈಲು ನಿಲ್ದಾಣ, ಬಸ್ ನಿಲ್ದಾಣದಲ್ಲೂ ವ್ಯಾಪಕ ಶೋಧ ನಡೆಸಲಾಗುತ್ತಿದೆ. ಮಾತ್ರವಲ್ಲ ತನಿಖೆಯನ್ನು ಸಮೀಪದ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ.
ಕೇರಳದಲ್ಲಿ ಬಾಲಕಿಯರನ್ನು ಈ ರೀತಿ ಅಪಹರಿಸುವುದು ಕಳೆದ ಒಂದು ವರ್ಷದಲ್ಲಿ ಮೂರನೇ ಘಟನೆಯಾಗಿದೆ.