ಡಿವೈಎಫ್‌ಐ ಕಾರ್ಯಕರ್ತನನ್ನು ಕೊಲೆಗೈದ ಪ್ರಕರಣ: 9 ಆರ್ಎಸ್ಎಸ್-ಬಿಜೆಪಿ ಕಾರ್ಯಕರ್ತರಿಗೆ ಜೀವಾವಧಿ ಸಜೆ
ತಲಶ್ಶೇರಿ: ಡಿವೈಎಫ್ಐ (ಸಿಪಿಎಂ) ಕಾರ್ಯಕರ್ತನನ್ನು ಕೊಲೆಗೈದ ಪ್ರಕರಣ ಆರ್ಎಸ್ಎಸ್- ಬಿಜೆಪಿ ಕಾರ್ಯಕರ್ತರಾದ 9 ಮಂದಿ ಆರೋಪಿಗಳಿಗೆ ತಲಶ್ಶೇರಿ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ (ತೃತೀಯ) ಜೀವಾವಧಿ ಸಜೆ ಹಾಗೂ ತಲಾ 1,11,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ಕಣ್ಣಾಪುರಂನ ವಿ.ವಿ. ಸುಧಾಕರನ್ (57), ಜಯೇಶ್ (41), ಚುಂಡದ ಸಿ.ಪಿ. ರಂಜಿತ್ (44), ಪುದಿಯ ಪರಂಬಿಲ್ ಪಿ.ಪಿ. ಅಜೀಂದ್ರನ್ (51), ಅನಿಲ್ ಕುಮಾರ್ (52), ಪಿ.ಪಿ. ರಾಜೇಶ್ (46), ವಿ.ವಿ. ಶ್ರೀಕಾಂತ್ (47), ವಿ.ವಿ. ಶ್ರೀಜಿತ್ (43) ಮತ್ತು ಟಿ.ವಿ. ಭಾಸ್ಕರನ್ (67) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಗೊಳಗಾದವರಲ್ಲಿ ನಾಲ್ವರು ಸಹೋದರರಾಗಿದ್ದಾರೆ.
2005 ಅಕ್ಟೋಬರ್ 3ರಂದು ರಾತ್ರಿ 7.45ಕ್ಕೆ ಚುಂಡತಚ್ಚನ್ ಕಂಡಿ ದೇವಸ್ಥಾನದ ಬಳಿ ಡಿವೈಎಫ್ಐ- ಸಿಪಿಎಂ ಕಾರ್ಯಕರ್ತನಾದ ಅಲಿಚ್ಚಿ ವೀಟಿಲ್ ರಿಜಿತ್ ಶಂಕರ್ (25) ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಗಳಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಕೊಲೆ ನಡೆದ 19 ವರ್ಷಗಳ ಬಳಿಕ ಈ ಪ್ರಕರಣದ ತೀರ್ಪು ಹೊರಬಂದಿದೆ.