ತಲೆಯಲ್ಲಿ ಭರಣಿ ಸಿಲುಕಿ ಸಂಕಷ್ಟದಲ್ಲಿದ್ದ ನಾಯಿಯನ್ನು ಅಪಾಯದಿಂದ ಪಾರು ಮಾಡಿದ ವ್ಯಾಪಾರಿ, ಅನ್ಯರಾಜ್ಯ ಕಾರ್ಮಿಕರು
ಕುಂಬಳೆ: ಪ್ಲಾಸ್ಟಿಕ್ ಭರಣಿಯೊಳಗೆ ತಲೆ ಸಿಲುಕಿಕೊಂಡು ಹಲವು ದಿನಗಳಿಂದ ವಿವಿಧೆಡೆ ಅಲೆ ದಾಡುತ್ತಾ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬೀದಿನಾಯಿಯನ್ನು ಪ್ರಾಣಿ ಸ್ನೇಹಿ ಹಾಗೂ ಅನ್ಯರಾಜ್ಯ ಕಾರ್ಮಿಕರು ಸೇರಿ ರಕ್ಷಿಸಿದರು.
ಕುಂಬಳೆ ಭಾಸ್ಕರನಗರ ನಿವಾಸಿ ವ್ಯಾಪಾರಿಯಾದ ಮುಹಮ್ಮದ್ ಅಸೀಸ್ ಹಾಗೂ ಬಿಹಾರ ನಿವಾಸಿಗಳಾದ ವಿನೋದ್ ಹಾಗೂ ಬೋಲ ಎಂಬಿವರು ಸೇರಿ ನಾಯಿಯನ್ನು ಹಿಡಿದು ಅಜರ ತಲೆಯನ್ನು ಭರಣಿಯಿಂದ ತೆಗೆದಿದ್ದಾರೆ.
ಒಂದು ವಾರ ಹಿಂದೆ ಕುಂಬಳೆ ಬದ್ರಿಯಾ ನಗರದಲ್ಲಿ ತಲೆ ಭರಣಿಯಲ್ಲಿ ಸಿಲುಕಿಕೊಂಡ ನಾಯಿ ಅಲೆದಾಡುತ್ತಿತ್ತು. ಹಲವರು ಭರಣಿ ತೆರವುಗೊಳಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನಾಯಿಯ ಈ ದಯನೀಯ ಸ್ಥಿತಿಯ ಕುರಿತು ‘ಕಾರವಲ್’ ವರದಿ ಪ್ರಕಟಿಸಿತ್ತು. ವರದಿಯನ್ನು ಗಮನಿಸಿದ ಯು.ಪಿ. ತಾಹಿರ ಯೂಸಫ್ ಕುಂಬಳೆಯ ವರದಿಗಾರನೊಂದಿಗೆ ವಿಷಯ ಕೇಳಿ ತಿಳಿದುಕೊಂಡರು ಬಳಕ ಅಧ್ಯಕ್ಷೆಯ ನಿರ್ದೇಶ ಮೇರೆಗೆ ಪಶುವೈದ್ಯ ಡಾ| ಅರುಣ್‌ರಾಜ್, ಸಾಮಾಜಿಕ ಕಾರ್ಯಕರ್ತೆ ಬಿಂದು ಬೆಂಜಮಿನ್, ಮೃಗಸ್ನೇಹಿಯಾದ ಮುಹಮ್ಮದ್ ಅಸೀಸ್ ಎಂಬಿವರು ನಾಯಿಗಾಗಿ ಶೋಧ ಆರಂಭಿಸಿದರೂ ಪತ್ತೆಹಚ್ಚಲಾಗಲಿಲ್ಲ. ಇದರಿಂದ ಮಹಮ್ಮದ್ ಅಸೀಸ್ ಅನ್ಯ ರಾಜ್ಯ ಕಾರ್ಮಿಕರಾದ ವಿನೋದ್ ಹಾಗೂ ಬೋಲ ಎಂಬವನ್ನು ಸೇರಿಸಿಕೊಂಡು ಹಲವೆಡೆಗಳಲ್ಲಿ ಹುಡುಕಾಡಿ ರಹ್ಮತ್‌ನಗರದಲ್ಲಿ ಪತ್ತೆಹಚ್ಚಿದರು. ಬಳಿಕ ನಾಯಿಯನ್ನು ಹಿಡಿದು ಭರಣಿ ತೆಗೆದು ಮಾನವೀಯತೆ ಮೆರೆದರು. ಇದರಿಂದ ನಿಟ್ಟುಸಿರು ಬಿಟ್ಟ ನಾಯಿ ಪುನರ್ಜನ್ಮ ಲಭಿಸಿದ ಸಂತಸದಲ್ಲಿ ಓಡಿ ಹೋಯಿತು. ನಾಯಿಯನ್ನು ಅಪಾಯದಿಂದ ಪಾರು ಮಾಡಿದ ಮೊಹಮ್ಮದ್ ಅಸೀಸ್ ಹಾಗೂ ಕಾರ್ಮಿಕರನ್ನು ನಾಗರಿಕರು ಅಭಿನಂದಿಸಿದ್ದಾರೆ.