ತಲೆಯಿಲ್ಲದ ಮಾವಿನ ಮರದಲ್ಲಿ ಹೂವಿನ ಗಿಡಗಳು: ಜನರಲ್ ಆಸ್ಪತ್ರೆ ನೌಕರನ ಪರಿಸರ ಪ್ರೇಮ
ಕಾಸರಗೋಡು: ಕಟ್ಟಡ ನಿರ್ಮಾಣಕ್ಕಾಗಿ ತಲೆ, ರೆಂಬೆ, ಕೊಂಬೆಗಳನ್ನು ಕಡಿದು ಬೋಳಾಗಿರುವ ಮಾವಿನ ಮರ ಇದೀಗ ಹೂವಿನ ಗಿಡಗಳಿಗೆ ಆಶ್ರಯವಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆ ಬಳಿ ಹಲವು ವರ್ಷಗಳ ಹಳಮೆಯುಳ್ಳ ಮಾವಿನ ಮರದ ವಿಶೇಷತೆಯಾಗಿದೆ ಇದು. ತಿಂಗಳುಗಳ ಹಿಂದೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಈ ಮಾವಿನ ಮರದ ರೆಂಬೆಗಳನ್ನು ಕಡಿದು ತೆಗೆಯಲಾಗಿದೆ. ಉಳಿದಿರುವ ಎರಡು ರೆಂಬೆಗಳಲ್ಲಿ ಇದೀಗ ಹೂವಿನ ಗಿಡಗಳ ಕುಂಡಗಳು ಗಮನ ಸೆಳೆಯುತ್ತಿವೆ. ಇದು ಜನರಲ್ ಆಸ್ಪತ್ರೆಯ ನೌಕರನಾದ ಮಾಂಗಾಡ್ ಮೇಲ್ಬಾರ ನಿವಾಸಿ ಶಿವರಾಮನ್‌ರ ಪರಿಸರ ಪ್ರೇಮದ ಫಲವಾಗಿದೆ.
ಜನರಲ್ ಆಸ್ಪತ್ರೆಯ ವೈದ್ಯರು ಸಹಿತ ನೌಕರರು ಇಲ್ಲಿಂದ ಬೇರೆಡೆಗೆ ವರ್ಗಾವಣೆಗೊಂಡು ತೆರಳುವಾಗ ಹೂವಿನ ಗಿಡಗಳನ್ನು ಕೊಡುಗೆಯಾಗಿ ಕೊಟ್ಟಿರುತ್ತಾರೆ. ಅವುಗಳನ್ನು ಆಸ್ಪತ್ರೆಯ ಆಸುಪಾಸಿನಲ್ಲಿ ಇಡಲಾಗಿತ್ತು. ಆ ಪರಿಸರವನ್ನು ಶುಚಿಗೊಳಿಸುವ ಕಾರ್ಯದ ಅಂಗವಾಗಿ ಹೂವಿನ ಗಿಡಗಳ ಕುಂಡಗಳನ್ನು ಶಿವರಾಮನ್ ಮರದ ರೆಂಬೆಗಳ ಮೇಲೆ ಹಾಗೂ ಬದಿಗಳಲ್ಲಿ ಇರಿಸಿ ನಿತ್ಯ ನೀರೆರೆದು ಪೋಷಿಸುತ್ತಿದ್ದಾರೆ. ಇವರ ಪ್ರಯತ್ನದ ಫಲವಾಗಿ ಗಿಡಗಳು ಬೆಳೆದು ನಿಂತು ನೋಡುಗರ ಕಣ್ಮನ ಸೆಳೆಯುತ್ತಿದೆ.