ತಳಂಗರೆಯಲ್ಲಿ ಬೈಕ್‌ಗಳಿಗೆ ಕಿಚ್ಚಿರಿಸಿದ ಆರೋಪಿ ಸೆರೆ

ಕಾಸರಗೋಡು: ತಳಂಗರೆ ಪಳ್ಳಿಕ್ಕಾಲ್ ಮಸೀದಿ ಕ್ವಾರ್ಟರ್ಸ್‌ನ ಮುಂದೆ ನಿಲ್ಲಿಸಲಾಗಿದ್ದ ಅಧ್ಯಾಪಕರ ಬೈಕ್‌ಗಳಿಗೆ  ಕಿಚ್ಚಿರಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಮಲಪ್ಪುರಂ ವಳಾಂಚೇರಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ವಿ.ಪಿ. ಸೈದಲಿ (೫೮) ಬಂಧಿತ ಆರೋಪಿ. ಊರಿನಲ್ಲಿ ತಾನು ಚಿಟ್ ಫಂಡ್ ವ್ಯವಹಾರದಲ್ಲಿ ತೊಡಗಿದ್ದೆನೆಂದೂ ಅದರಿಂದ ನನಗೆ ಸುಮಾರು ೫೦ ಸಾವಿರ ರೂ.ಗಳಷ್ಟು ನಷ್ಟವುಂಟಾಗಿತ್ತು. ಅದರಿಂದ ತೀವ್ರ ದುಃಖಿತನಾದ ನಾನು ಏನು ಮಾಡಬೇಕೆಂದು ತೋಚದೆ ಬೈಕ್‌ಗೆ ಕಿಚ್ಚಿರಿಸಿರುವುದಾಗಿ ಬಂಧಿತನು ಪೊಲೀಸರಲ್ಲಿ ತಿಳಿಸಿದ್ದಾನೆ.  ಬೈಕ್ ಮಾಲಕನಾದ ಅಧ್ಯಾಪಕರೊಂದಿಗೆ ತಾನು ಯಾವುದೇ ರೀತಿಯ ಸಂಬಂಧವಾಗಲೀ, ದ್ವೇಷವಾಗಲೀ ಹೊಂದಿಲ್ಲವೆಂದು ಆತ ಪೊಲೀಸರಲ್ಲಿ ತಿಳಿಸಿದ್ದಾನೆ. ಆರೋಪಿ ಮೂರು ದಿನಗಳ ಹಿಂದೆಯಷ್ಟೇ ಮಲಪ್ಪುರದಿಂದ ಕಾಸರಗೋಡಿಗೆ ಬಂದಿದ್ದನೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ತಳಂಗರೆ ಪಳ್ಳಿಕ್ಕಾಲ್ ಮಸೀದಿ ಕ್ವಾರ್ಟರ್ಸ್ ಬಳಿ ನಿಲ್ಲಿಸಲಾಗಿದ್ದ ಎರಡು ಬೈಕ್‌ಗಳಿಗೆ ಕಳೆದ ಸೋಮವಾರ ಮುಂಜಾನೆ ಕಿಚ್ಚಿರಿಸಲಾಗಿತ್ತು. ಅದರಲ್ಲಿ    ಒಂದು ಬೈಕ್ ಪೂರ್ಣವಾಗಿ, ಇನ್ನೊಂದು ಆಂಶಿಕವಾಗಿ ಉರಿದು ಹಾನಿಗೊಂಡಿತ್ತು. ಪೂರ್ಣವಾಗಿ ನಾಶಗೊಂಡ ಬೈಕ್ ಮಲಪ್ಪುರಂ ಪುಳಿಕ್ಕಲ್ ಕೋಡಿ ಕುತ್ತಿಪರಂಬ್ ನಿವಾಸಿ ಹಾಗೂ ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕರಾದ ಯು. ನೆಜುಮುದ್ದೀನ್‌ರದ್ದಾಗಿದೆ. ಆಂಶಿಕವಾಗಿ ಹಾನಿಗೊಂಡ ಬೈಕ್ ಮಲಪ್ಪುರಂ ವಲಿಯೋರ ಆಶಾರಿಪಡಿಯ ಮೊಹಮ್ಮದ್ ಸಾಜಿದ್ ಎಂಬವರದ್ದಾಗಿದೆ. ಈ ಇಬ್ಬರು ಮಸೀದಿ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ಓಣಂ ಪ್ರಯುಕ್ತ ಅವರು ಬೈಕ್‌ಗಳನ್ನು ಅಲ್ಲೇ ನಿಲ್ಲಿಸಿ ಊರಿಗೆ ಹೋಗಿದ್ದರು.

ಬಂಧಿತ ಆರೋಪಿ ತಳಂಗರೆಯ ಗೂಡಂಗಡಿಯೊಂದಕ್ಕೂ ಕಿಚ್ಚಿರಿಸಿದ್ದಾನೆ. ಆದರೆ ಅದರ ಬಟ್ಟೆಗೆ ಮಾತ್ರವೇ ಬೆಂಕಿ ತಗಲಿಕೊಂಡಿದ್ದು,  ಇತರ ಯಾವುದೇ ಹೆಚ್ಚಿನ  ಹಾನಿಉಂಟಾಗಿಲ್ಲ. ಆರೋಪಿ ಆ ಗೂಡಂಗಡಿ ಮಾಲಕನಿಂದ ಸಹಾಯ ರೂಪದಲ್ಲಿ ಹಣ ಕೇಳಿದ್ದನು. ಆದರೆ ಗೂಡಂಗಡಿ ಮಾಲಕ ಹಣ ನೀಡಿರಲಿಲ್ಲ. ಆ ದ್ವೇಷದಿಂದ ಆರೋಪಿ ಗೂಡಂಗಡಿಗೆ ಕಿಚ್ಚಿರಿಸಿದ್ದನೆಂದು ತನಿಖೆಯಲ್ಲಿ ವ್ಯಕ್ತವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page