ತಾಯಿ ಜತೆ ಪೇಟೆಗೆ ಬಂದ ಬಾಲಕಿಯೊಂದಿಗೆ ಅನುಚಿತ ವರ್ತನೆ: ನೆಲ್ಲಿಕಟ್ಟೆ ನಿವಾಸಿ ಪೋಕ್ಸೋ ಪ್ರಕಾರ ಬಂಧನ ; ಕಾರಿನಿಂದ ಬ್ಯಾಗ್ ಕಳವುಗೈದ ಪ್ರಕರಣದಲ್ಲೂ ಆರೋಪಿ
ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಿನ್ನೆ ತಾಯಿ ಜತೆ ನಡೆದುಕೊಂಡು ಹೋಗುತ್ತಿದ್ದ 16 ವರ್ಷದ ಬಾಲಕಿ ಯ ದೇಹ ಸ್ಪರ್ಶಿಸಿ ಆಕೆಯೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸಿದ ದೂರಿನಂತೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.
ನೆಕ್ರಾಜೆ ನೆಲ್ಲಿಕಟ್ಟೆ ಲಕ್ಷಂವೀಡು ಕಾಲನಿಯ ನವಾಜ್ ಪಿ.ಎಂ (40) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಂತರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಇದೇ ಆರೋಪಿ ವಿರುದ್ಧ ಕಾರಿನಿಂದ ಬ್ಯಾಗ್ ಕಳವುಗೈದ ದೂರಿನಂತೆ ಕಾಸರಗೋಡು ಪೊಲೀಸರು ಇನ್ನೊಂದೆಡೆ ಬೇರೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ಅಣಂಗೂರು ಶಿವಶೈಲ ನಿವಾಸಿ ಸುಕುಮಾರನ್ ಕೆ (64) ಎಂಬವರು ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ. ಕಾಸರಗೋಡು ಸಬ್ ಜೈಲ್ ಸಮೀಪ ನಿನ್ನೆ ಬೆಳಿಗ್ಗೆ ನಿಲ್ಲಿಸಿದ್ದ ನನ್ನ ಕಾರಿನ ಗಾಜನ್ನು ಕಲ್ಲಿನಿಂದ ಪುಡಿಗೈದು ಕಾರಿನೊಳಗಿದ್ದ ಬ್ಯಾಗ್ ಮತ್ತು ಮೊಬೈಲ್ ಫೋನ್ ಕಳವುಗೈದಿರುವುದಾಗಿ ಸುಕುಮಾರನ್ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದಾದ ಬಳಿಕ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ದೂರಿನಂತೆ ಪೊಲೀಸರು ಆರೋಪಿ ನವಾಜ್‌ನನ್ನು ಬಂಧಿಸಿದ್ದರು. ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸಬ್ ಜೈಲ್ ಪರಿಸರದಲ್ಲ್ಲಿಸುಕುಮಾರನ್‌ರ ಕಾರಿನಿಂದ ಬ್ಯಾಗ್ ಮತ್ತು ಮೊಬೈಲ್ ಫೋನ್ ಕಳವುಗೈದಿರುವುದೂ ಈತನೇ ಆಗಿರುವುದಾಗಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.