ತಿರುಪತಿಯಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿಕೆ
ತಿರುಪತಿ: ತಿರುಪತಿಯಲ್ಲಿರುವ ವೈಕುಂಠ ಧ್ವಾರದರ್ಶನ ಟಿಕೆಟ್ ಖರೀದಿಸುವ ಕೇಂದ್ರದ ಬಳಿ ಕಾಲ್ತುಳಿತ ಸಂಭವಿಸಿ ಸಾವನ್ನಪ್ಪಿದವರ ಸಂಖ್ಯೆ ಈಗ 7ಕ್ಕೇರಿದೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರ ಪೈಕಿ ಆರು ಮಂದಿಯನ್ನು ಗುರುತಿಸಲಾಗಿದೆ. ನರ್ಸೀಪಟ್ಟಣದ ಬಿ. ನಾಯ್ಡುಬಾಬು (51), ರಜನಿ (47), ಲಾವಣ್ಯ (40), ವಿಶಾಖಪಟ್ಟಣದ ಶಾಂತಿ (34), ಕರ್ನಾಟಕ ಬಳ್ಳಾರಿಯ ನಿರ್ಮಲಾ (50) ಮತ್ತು ತಮಿಳುನಾಡು ಸೇಲಂನ ಮಲ್ಲಿಗಾ (49) ಎಂಬವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದವರು. ಗಾಯಗೊಂಡು ಆಸ್ಪತ್ರೆಗೆ ದಾಖಲಾದವರ ಪೈಕಿ ಹಲವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈಕುಂಠ ದರ್ಶನಕ್ಕೆ ಬಂದ ಭಕ್ತರನ್ನು ಪದ್ಮಾವತಿ ಉದ್ಯಾನವನದಲ್ಲಿ ನಿಲ್ಲಿಸಲಾಗಿತ್ತು. ಅಷ್ಟರಲ್ಲಿ ಮಹಿಳೆಯೊಬ್ಬರು ಅಸ್ವಸ್ಥಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಿಬ್ಬಂದಿಗಳು ಗೇಟ್ ತೆರೆದಿದ್ದರು. ಆದರೆ ಟೋಕನ್ ನೀಡಲು ಗೇಟ್ ತೆರೆಯಲಾಗಿದೆ ಎಂದು ಭಾವಿಸಿದ ಭಕ್ತರು ಏಕಾಏಕಿ ನುಗ್ಗಿದಾಗ ಅದು ಕಾಲ್ತುಳಿತಕ್ಕೆ ಕಾರಣವಾಯಿತೆಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡಾ ಸಂತಾಪ ವ್ಯಕ್ತಪಡಿಸಿದ್ದಾರೆ.