ತೋಡಿಗೆ ಮಲಿನ ಜಲ ಹರಿಯಬಿಟ್ಟ ಮೂಲ ಪತ್ತೆಹಚ್ಚಿ ದಂಡ ವಸೂಲಿ
ಮಧೂರು: ಪಂಚಾಯತ್ ವ್ಯಾಪ್ತಿಯ ಚೂರಿತ್ತೋಡಿನಲ್ಲಿ ತ್ಯಾಜ್ಯಗಳು ಹಾಗೂ ಮಲಿನ ಜಲ ಕಟ್ಟಿನಿಂತು ಅಸಹನೀಯವಾದ ದುರ್ವಾಸನೆ, ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ಪರಿಶೀಲನೆಯಲ್ಲಿ ಗಂಭೀರ ಕಾನೂನು ಉಲ್ಲಂಘನೆಗಳನ್ನು ಪತ್ತೆಹಚ್ಚಲಾಗಿದೆ. ಕಾಸರಗೋಡು ನಗರಸಭೆಯ ಬಸ್ ನಿಲ್ದಾಣ ಸಮೀಪವಿರುವ ಕಾಂಪ್ಲೆಕ್ಸ್‌ನಿಂದ, ಸಮೀಪದ ಕಟ್ಟಡದಿಂದಿರುವ ಉಪಯೋಗಶೂನ್ಯ ಜಲವನ್ನು ಪ್ರತ್ಯೇಕ ವ್ಯವಸ್ಥೆ ಮಾಡಿ ಕೋಟೆಕಣಿ- ಸೂರ್ಲು ರಸ್ತೆಯ ಸಮೀಪದ ಸಾರ್ವಜನಿಕ ಚರಂಡಿಗೆ ಹರಿಯಬಿಟ್ಟಿರುವುದು ಪತ್ತೆಯಾಗಿದೆ. ಮಧೂರು ಪಂಚಾಯತ್‌ಗೊಳಪಟ್ಟ ಚೂರಿ ರೆಸ್ಟೋರೆಂಟ್‌ನಿಂದಲೂ, ಕೆಲವು ಮನೆಗಳಿಂದಲೂ ಇರುವ ಮಲಿನ ಜಲ ಹಾಗೂ ತ್ಯಾಜ್ಯಗಳನ್ನು ಚರಂಡಿಗೆ ಹಾಕಿರುವುದಾಗಿ ಪತ್ತೆಹಚ್ಚಲಾಗಿದೆ. ಕಟ್ಟಡದಿಂದಿರುವ ಮಲಿನ ಜಲವನ್ನು ಸಾರ್ವಜನಿಕ ಚರಂಡಿಗೆ ಹರಿಯಬಿಟ್ಟಿರುವ ಕಾಂಪ್ಲೆಕ್ಸ್ ಮಾಲಕನಿಗೆ 25,000 ರೂ. ಹಾಗೂ ಕಟ್ಟಡಕ್ಕೆ 10,000 ರೂ.ನಂತೆ ದಂಡ ಹೇರಲಾಯಿತು. ಸೂರ್ಲುವಿನ ಅಂಗಡಿಗೆ 5,000 ರೂ. ದಂಡ ಹೇರಲಾಗಿದೆ.
ಮಲಿನ ಜಲವನ್ನು ಚರಂಡಿಗೆ ಹರಿಯುವಂತೆ ಸಿದ್ಧಪಡಿಸಿದ ವ್ಯವಸ್ಥೆಯನ್ನು ಒಂದು ವಾರದೊಳಗೆ ತೆರವುಗೊಳಿಸಬೇಕೆಂದು ಸಂಬಂಧಪಟ್ಟವರಿಗೆ ಸೂಚಿಸಲಾಯಿತು. ಇಲ್ಲದಿದ್ದರೆ ಕಾರ್ಯದರ್ಶಿಗಳು ನೇರವಾಗಿ ಅದಕ್ಕಿರುವ ಕ್ರಮಗಳನ್ನು ಸ್ವೀಕರಿಸಿ ಅದರ ವೆಚ್ಚವನ್ನು ಸಂಸ್ಥೆಯ ಮಾಲಕರಿಂದ ವಸೂಲು ಮಾಡುವುದಾಗಿಯೂ ಸೂಚಿಸಲಾಯಿತು. ತೋಡಿಗೆ ತ್ಯಾಜ್ಯ ಎಸೆಯುವುದು, ಮಲಿನ ಜಲವನ್ನು ಹರಿಯಬಿಡುವುದನ್ನು ಪತ್ತೆಹಚ್ಚಲು ಮುಂದಿನ ದಿನಗಳಲ್ಲೂ ತಪಾಸಣೆಗಳನ್ನು ಮುಂದುವರಿಸಲಾಗುವುದು ಎಂದು ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ತಿಳಿಸಿದೆ. ತಪಾಸಣಾ ತಂಡದಲ್ಲಿ ಕೆ.ವಿ. ಮೊಹಮ್ಮದ್ ಮದನಿ, ಆಶಾ ಮೇರಿ, ಕೆ. ಅಶೋಕ್ ಕುಮಾರ್, ಇ.ಕೆ. ಫಾಸಿಲ್ ಮೊದಲಾದವರಿದ್ದರು.