ದರೋಡೆ ಪ್ರಕರಣದ ಆರೋಪಿಗಳನ್ನು ಸೆರೆಹಿಡಿಯಲು ಹೋದ ಕೇರಳ ಪೊಲೀಸರ ಮೇಲೆ ಗುಂಡು ಹಾರಾಟ

ಎರ್ನಾಕುಳಂ: ಕೇರಳದ ವಿವಿಧ ಜಿಲ್ಲೆಗಳಲ್ಲಿ ಚಿನ್ನ ದರೋಡೆಗೈದ ಪ್ರಕರಣದ ಆರೋಪಿಗಳನ್ನು ಸೆರೆಹಿಡಿಯಲು ರಾಜಸ್ಥಾನದ ಅಜ್ಮೀರಿಗೆ ಹೋದ ಎರ್ನಾಕುಳಂ ಪೊಲೀಸ್ ತಂಡದ ಮೇಲೆ ದುಷ್ಕರ್ಮಿಗಳು ಗುಂಡು ಹಾರಾಟ ನಡೆಸಿದ ಘಟನೆ ನಡೆದಿದೆ.

ಆಲುವಾ  ಗ್ರಾಮೀಣ ಜಿಲ್ಲಾ ಪೊಲೀಸ್ ವ್ಯಾಪ್ತಿಗೊಳಪಟ್ಟ ಪೊಲೀಸರ ಸಹಿತ ಎರ್ನಾಕುಳಂ ಪೊಲೀಸರ ತಂಡ ಅಜ್ಮೀರಿಗೆ ತೆರಳಿ ಕಾರ್ಯಾಚರಣೆಯಲ್ಲಿ  ಇಳಿಯುತ್ತಿರುವಂತೆಯೇ ಅಲ್ಲಿ ಅಡಗಿನಿಂತು ಹೊಂಚು ಹಾಕುತ್ತಿದ್ದ ದುಷ್ಕರ್ಮಿಗಳ ತಂಡ ಪೊಲೀಸರ ಮೇಲೆ  ಗುಂಡು ಹಾರಾಟ ನಡೆಸಿದೆ. ಆದರೆ  ಯಾರೂ ಗಾಯಗೊಂಡಿಲ ವೆಂದು ಎಲ್ಲಾ ಪೊಲೀಸರು ಸಂಭಾವ್ಯ ಪ್ರಾಣಾಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾರೆಂದು ಆಲುವಾ ಗ್ರಾಮೀಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಆಲುವಾ ಗ್ರಾಮೀಣ ಪೊಲೀಸ್ ಜಿಲ್ಲಾ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಇತ್ತೀಚೆಗೆ ಚಿನ್ನದೊಡವೆ ದರೋಡೆಗೈದ ಪ್ರಕರಣ ನಡೆದಿದೆ. ತನಿಖೆಯಲ್ಲಿ ಈ ಪ್ರಕರಣದ ಆರೋಪಿಗಳು ಅಜ್ಮೀರ್ ನಲ್ಲಿರುವುದಾಗಿ  ಸ್ಪಷ್ಟ ಮಾಹಿತಿ ಲಭಿಸಿತ್ತು. ಅದರಂತೆ ಪೊಲೀಸರ ತಂಡ ಅಜ್ಮೀರ್ ದರ್ಗಾ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶಕ್ಕೆ ಸಾಗಿ ಅಲ್ಲಿನ  ಪೊಲೀಸರ ಸಹಾಯದಿಂದ ಆರೋಪಿಗಳನ್ನು ಸೆರೆಹಿಡಿಯಲು  ಹೋದಾಗ ಅಕ್ರಮಿಗಳ ತಂಡ ಪೊಲೀಸರ ಮೇಲೆ ಮೂರು ಸುತ್ತು ಗುಂಡು ಹಾರಿಸಿದೆ.  ಪೊಲೀಸ್ ಮತ್ತು ಅಕ್ರಮಿಗಳ ತಂಡ ನಡುವಿನ ಕಾಳಗ ಸತತ ಮೂರು ತಾಸುಗಳ ತನಕ ಮುಂದುವರಿದಿದೆ. ಈಮಧ್ಯೆ ಗುಂಡು ಹಾರಾಟವನ್ನೂ ಲೆಕ್ಕಿಸದೆ ಧೈರ್ಯದಿಂದ ಮುನ್ನುಗ್ಗಿದ ಕೇರಳ ಪೊಲೀಸರು ಕೊನೆಗೂ ಇಬ್ಬರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ. ಉತ್ತರಾಖಂಡ್ ನಿವಾಸಿಗಳಾದ ಶಹಜಾದ್ ಮತ್ತು ಸಾಜಿದ್ ಬಂಧಿತರಾದ ಆರೋಪಿಗಳು. ಇವರು ಉಪಯೋಗಿಸಿದ ಎರಡು ನಾಡ ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಮೊದಲು ಅಜ್ಮೀರ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಕೇರಳಕ್ಕೆ ತರುವ ಸಿದ್ಧತೆಯಲ್ಲಿ ಪೊಲೀಸರು ತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page