ದೇವಸ್ಥಾನಗಳಲ್ಲಿ ಪುರುಷರು ಅಂಗಿ ಕಳಚಿ ಪ್ರವೇಶಿಸುವ ಪದ್ಧತಿ ರದ್ದುಪಡಿಸುವ ಬಗ್ಗೆ ದೇವಸ್ವಂ ಮಂಡಳಿ ಚಿಂತನೆ-ಮುಖ್ಯಮಂತ್ರಿ
ತಿರುವನಂತಪುರ: ಕೇರಳದ ಕೆಲವು ದೇವಸ್ಥಾನಗಳಲ್ಲಿ ಪ್ರವೇಶಿಸುವ ಪುರುಷರು ಮೊದಲು ಅಂಗಿ ತೆಗೆಯಬೇಕೆಂಬ ಪದ್ಧತಿಯನ್ನು ರದ್ದುಗೊಳಿಸಲು ಕೇರಳದ ಮುಜರಾಯಿ ಮಂಡಳಿ ಚಿಂತನೆ ನಡೆಸುತ್ತಿದೆಯೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ನಿರ್ಧಾರ ರಾಜ್ಯದಲ್ಲಿ ಭಾರೀ ವಿವಾದವಾಗುವ ಸಾಧ್ಯತೆಯಿದೆ.
ಮೊನ್ನೆ ಶಿವಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ರೀ ಮಠದ ಮುಖ್ಯಸ್ಥ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಪುರುಷರು ಜನಿವಾರ ಧರಿಸಿದ್ದಾರೆಯೇ ಎಂಬುವು ದನ್ನು ಪರಿಶೀಲಿಸಲು ದೇವಸ್ಥಾನದೊಳಗೆ ಪ್ರವೇಶಿಸುವ ಪುರುಷರು ಅಂಗಿ ಕಳಚುವ ಸಂಪ್ರದಾಯ ಆರಂಭಿಸಲಾಗಿತ್ತು. ಇದು ಒಂದು ಸಾಮಾಜಿಕ ಪಿಡುಗು. ಇಂತಹ ಪದ್ಧತಿಯನ್ನು ಇನ್ನಾದರೂ ಕೊನೆಗೊಳಿಸಬೇಕಾಗಿದೆಯೆಂದು ಅವರು ಆಗ್ರಹಿಸಿದ್ದರು. ಜತೆಗೆ ಶ್ರೀ ನಾರಾಯಣ ಗುರುಗಳಿಗೆ ಸಂಬಂಧಿ ಸಿದ ಎಲ್ಲಾ ದೇವಸ್ಥಾನಗಳಲ್ಲೂ ಇದನ್ನು ನಿಷೇಧಿಸಲಾಗುವುದೆಂದು ಅವರು ಹೇಳಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶ್ರೀಗಳ ಹೇಳಿಕೆ ಬೆಂಬಲಿಸಿದ್ದರು. ಅದರ ಬೆನ್ನಲ್ಲೇ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಶಿವಗಿರಿ ಮಠದ ಮುಖ್ಯಸ್ಥರಾದ ಸಚ್ಚಿದಾನಂದ ಸ್ವಾಮಿಗಳು ಹೇಳಿದ ಮಾತುಗಳು ನನಗೆ ಉತ್ತಮ ಸಲಹೆಯಂತೆ ಕಂಡಿತು. ಅದರಂತೆ ಅಂತಹ ಪದ್ಧತಿಯನ್ನು ರದ್ದುಗೊಳಿಸುವ ವಿಷಯವನ್ನು ಮುಜರಾಯಿ ಮಂಡಳಿ ಪರಿಶೀಲಿಸಲಿದೆಯೆಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಗುರುವಾಯೂರು, ತಿರುವಿದಾಂಕೂರು, ಮಲಬಾರ್, ಕೊಚ್ಚಿನ್ ಮತ್ತು ಕೂಡಲ್ ಮಾಣಿಕಂ ಎಂಬ ಐದು ಮುಜರಾಯಿ ಮಂಡಳಿಗಳಿವೆ. ಅವುಗಳ ವ್ಯಾಪ್ತಿಗೊಳಪಟ್ಟ ದೇಗುಲ ಪ್ರವೇಶದ ವೇಳೆ ಅಂಗಿ ಕಳಚುವ ಕುರಿತು ಚರ್ಚೆಗೆ ಬಿಜೆಪಿ ಆಗ್ರಹಿಸುತ್ತಿರುವ ಬಗ್ಗೆ ಸುದ್ಧಿಗಾರರು ಪ್ರಶ್ನಿಸಿದಾಗ ಇದನ್ನು ಚರ್ಚಿಸುವುದು ಮಂಡಳಿಗಳ ಕೆಲಸ, ಸರಕಾರದ್ದಲ್ಲವೆಂದು ಅದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ್ದಾರೆ.