ನಗರಸೌಂದರ್ಯಕ್ಕೆ ಒತ್ತು: ಕಾಸರಗೋಡು ನಗರಸಭೆಗೆ ಮಿಗತೆ ಬಜೆಟ್
ಕಾಸರಗೋಡು: ನಗರಸೌಂದರ್ಯಕ್ಕೆ ಒತ್ತು ನೀಡುವ ಕಾಸರಗೋಡು ನಗರಸಭೆಯ ೨೦೨೪-೨೫ನೇ ವಿತ್ತೀಯ ವರ್ಷದ ಮುಂಗಡಪತ್ರ (ಬಜೆಟ್)ವನ್ನು ನಗರಸಭಾ ಬಜೆಟ್ ಅಧಿವೇಶನದಲ್ಲಿ ನಗರಸಭಾ ಉಪಾಧ್ಯಕ್ಷೆ ಸಂಶೀದಾ ಫಿರೋಸ್ ಮೊನ್ನೆ ಮಂಡಿಸಿದರು.
ಈ ಹಿಂದೆ ಬಾಕಿ ಉಳಿದ ೭೨,೮೦,೪೪,೦೧೧ ರೂ. ಸೇರಿದಂತೆ ೬೮,೦೦,೮೫,೨೭೬ ರೂ.ಗಳ ತನಕ ಆದಾಯ ಹಾಗೂ ೬೩,೦೯,೦೬,೪೨೩ ರೂ. ವೆಚ್ಚ ನಿರೀಕ್ಷಿಸುವ ಮಿಗತೆ ಬಜೆಟ್ ನ್ನು ಮಂಡಿಸಲಾಯಿತು. ಕಾಸರಗೋಡು ನೆಲ್ಲಿಕುಂಜೆ ಸಮುದ್ರ ಕಿನಾರೆಯಲ್ಲಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ೪.೫ ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಕಾಸರಗೋಡು ನಗರಸಭೆ-ಮಧೂರು ಪಂಚಾಯತ್‌ನ್ನು ಸಂಪರ್ಕಿಸುವ ನೆಲ್ಕಳ-ಪಾರೆಕಟ್ಟೆ ರಸ್ತೆ ನಿರ್ಮಿಸಲಾಗುವುದು. ಕುಡಿಯುವ ನೀರು ಪೂರೈಕೆ, ಪ್ರಾಥಮಿಕ ಅಗತ್ಯ ನಿರ್ವಹಣೆ ಸೌಕರ್ಯ ಒಳಗಂಡ ಅಂತಾರಾಷ್ಟ್ರೀಯ ಮಟ್ಟದ ಬಸ್ ತಂಗುದಾಣ ನಿರ್ಮಿಸಲಾಗುವುದು. ಕಾಸರಗೋಡು ಜನರಲ್ ಆಸ್ಪತ್ರೆಗೆ ಎನ್.ಎಚ್.ಎಂ ಮಂಜೂರು ಮಾಡಲಾದ ೭.೫ ಕೋಟಿ ರೂ.ಗಳ ನಿರ್ಮಾಣ ಕೆಲಸ ಶೀಘ್ರ ಆರಂಭಿಸಲಾಗುವುದು. ಕೆಫೆ ಸೌಕರ್ಯ, ಶೌಚಾಲಯ, ಮಕ್ಕಳಿಗೆ ಆಟವಾಡುವ ಸೌಕರ್ಯ, ಪ್ರಯಾಣಿಕರಿಗೆ ವಿಶ್ರಾಂತಿ ಕೇಂದ್ರಗಳು ಇದರಲ್ಲಿ ಒಳಗೊಳ್ಳಲಿದೆ. ಕಾಸರಗೋಡು ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಪೇ ವಾರ್ಡ್ ಆರಂಭಿಸಲಾಗುವುದು. ಐ.ಸಿ. ಭಂಡಾರಿ ರಸ್ತೆ, ಚಂದ್ರಗಿರಿ ರಸ್ತೆ ಮತ್ತು ಎಂ.ಜಿ ರಸ್ತೆ ಜಂಕ್ಷನ್‌ನಿಂದ ನಾಯಕ್ಸ್ ರಸ್ತೆಗೆ ಹೋಗುವ ರಸ್ತೆ, ಹಳೆ ಪ್ರೆಸ್ ಕ್ಲಬ್ ಜಂಕ್ಷನ್‌ನಿಂದ ಚಂದ್ರಗಿರಿ ಸೇತುವೆ ತನಕದ ರಸ್ತೆಗಳನ್ನು ಅಗಲೀಕರಿಸಲಾಗುವುದು, ನಗರಸಭಾ ಕಚೇರಿ ಪರಿಸರದಲ್ಲಿ ಆಧುನಿಕ ರೀತಿಯ ಹೊಸ ಕಾನ್ಫರೆನ್ಸ್ ಹಾಲ್ ನಿರ್ಮಿಸಲಾಗುವುದು, ಇದರ ಕೆಳ ಅಂತಸ್ತಿನಲ್ಲಿ ಅಂಗಡಿ ಕೊಠಡಿಗಳನ್ನು ನಿರ್ಮಿಸಲಾಗುವುದು. ನಗರದ ವಾಹನ ಪಾರ್ಕಿಂಗ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪಾರ್ಕಿಂಗ್ ಫ್ಲಾಸಾ, ಅತ್ಯಾಧುನಿಕ ಬಸ್ ತಂಗುದಾಣ ನಿರ್ಮಿಸಲಾಗುವುದು. ಕಾಸರಗೋಡು ರೈಲು ನಿಲ್ದಾಣಕ್ಕೆ ಹೋಗಿಬರವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಹೊಸ ಬಸ್ ನಿಲ್ದಾಣದಿಂದ ಹೋಗಲು ಉಚಿತವಾಗಿ ಸೈಕಲ್ ಸೌಕರ್ಯ ಏರ್ಪಡಿಸಲಾಗುವುದು. ನಗರದಲ್ಲಿ ಆಹೋರಾತ್ರಿ ಕಾರ್ಯವೆಸಗುವ ನೈಟ್ ಸಿಟಿ ರೂಂ, ಟ್ರೆಡಿಶನಲ್ ಮಾರ್ಕೆಟ್, ಶುಚಿತ್ವ ಖಾತರಿಪಡಿಸಲು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸೀವೇಜ್ ಟ್ರೀಟ್‌ಮೆಂಟ್ ಪ್ಲಾಂಟ್ ಸ್ಥಾಪಿಸಲಾಗುವುದು. ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾಕ್ ಸೌಕರ್ಯವನ್ನು ಏರ್ಪಡಿಸಲಾಗುವುದೆಂದು ಬಜೆಟ್‌ನಲ್ಲಿ ಸೂಚಿಸಲಾಗಿದೆ. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧಿವೇಶನದ ಅಧ್ಯಕ್ಷತೆ ವಹಿಸಿದರು.