ಉಪ್ಪಳ: ಕಳೆದ ಹಲವು ದಿನಗಳಿಂದ ಬೇಸಿಗೆ ಮಳೆ ಸುರಿಯುತ್ತಿದ್ದರೂ ಕುಡಿಯುವ ನೀರು ವಿತರಣೆಯಾಗದೆ ಜನರ ಸಮಸ್ಯೆ ಮುಂದುವರಿದಿದೆ. ಕಳೆದ ಒಂದು ತಿಂಗಳಿಂದ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ನಳ್ಳಿ ನೀರು ವಿತರಣೆ ಮೊಟಕಾಗಿದೆ. ಯೋಜನೆ ಪ್ರದೇಶದ ಬಾವಿಯಲ್ಲಿ ನೀರು ಇಲ್ಲದ ಕಾರಣ ವಿತರಣೆ ಮೊಟಕುಗೊಂಡಿತ್ತು. ಪ್ರತಾಪನಗರ, ತಿಂಬರ, ಪುಳಿಕುತ್ತಿ ಸಹಿತ ಈ ಪ್ರದೇಶದ ವಿವಿಧ ಕಡೆಗಳಲ್ಲಿ ನೀರಿಗೆ ಈಗಲೂ ತತ್ವಾರವಿದೆ. ಮಳೆ ಸುರಿದರೂ ಇಲ್ಲಿನ ಬಾವಿಯಲ್ಲಿ ನೀರು ಸಂಗ್ರಹವಾಗದಿರುವುದೇ ಈಗಲೂ ವಿತರಣೆ ಮೊಟ
ಕಿಗೆ ಕಾರಣವಾಗಿರುವುದು. ಇದರಿಂದಾಗಿ ಹಣ ನೀಡಿ ನೀರು ಖರೀದಿಸಬೇಕಾದ ಸ್ಥಿತಿ ಇಲ್ಲಿದೆ. ಕೆಲವರು ದೂರ ಪ್ರದೇಶದಿಂದ ನೀರು ಹೊತ್ತು ತರುತ್ತಿದ್ದಾರೆ.
ಬೇಸಿಗೆಯಲ್ಲಿ ಕೊಡಂಗೆ ಹೊಳೆ ಸಂಪೂರ್ಣ ಬತ್ತಿತ್ತು. ಬೇಸಿಗೆ ಮಳೆ ಸುರಿದರೂ ಹೊಳೆಯಲ್ಲಿ ನೀರು ಸಂಗ್ರಹವಾಗಿಲ್ಲ. ನೀರು ವಿತರಣೆ ಮೊಟಕು ಇನ್ನಷ್ಟು ದಿನ ಮುಂದುವರಿಯಲಿದ್ದು, ಅಧಿಕಾರಿಗಳು ಶೀಘ್ರ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.