ನಿಲ್ಲಿಸಿದ್ದ ವಾಹನದಲ್ಲಿ ಇಬ್ಬರು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಲ್ಲಿಕೋಟೆ: ವಡಗರ ಕರಿಂಬನ ಪಾಲ ಎಂಬಲ್ಲಿ ನಿಲ್ಲಿಸಿದ್ದ ವಾಹನದೊಳಗೆ ಇಬ್ಬರು ವ್ಯಕ್ತಿಗಳು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತಪಟ್ಟವರು ಕಾಸರಗೋಡು ನಿವಾಸಿ ಜೋಯಲ್, ಮಲಪ್ಪುರಂನ ಮನೋಜ್ ಎಂಬವರೆಂದು ಗುರುತಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇವರು ಮಲಪ್ಪುರಂ ಪೊನ್ನಾನಿಯ ಕಾರವನ್ ಟೂರಿಸಂ ಕಂಪೆನಿಯ ನೌಕರರಾಗಿದ್ದಾರೆ. ಕಳೆದ ಆದಿತ್ಯವಾರ ಬೆಳಿಗ್ಗಿನಿಂದ ಕಾರವನ್ ರಸ್ತೆಯಲ್ಲಿ ನಿಲುಗಡೆಗೊಳಿಸಲಾಗಿತ್ತು. ಈ ಬಗ್ಗೆ ಸಂಶಯಗೊಂಡ ನಾಗರಿಕರು ನೀಡಿದ ಮಾಹಿತಿಯಂತೆ ಪೊಲೀಸರು ತಲುಪಿ ಪರಿಶೀಲಿಸಿದಾಗ ಓರ್ವ ವಾಹನದ ಮೆಟ್ಟಿಲಿನಲ್ಲಿ, ಇನ್ನೋರ್ವ ಒಳಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಕಾರವನ್ ಫ್ರೀ ಲಾಂಡ್ ಗ್ರೂಪ್ ಆಫ್ ಲಾಜಿಸ್ಟಿಕ್ ಮಲಪ್ಪುರಂನದ್ದಾಗಿದೆ. ಕಣ್ಣೂರಿನಲ್ಲಿ ಮದುವೆ ತಂಡವನ್ನು ಇಳಿಸಿ ಕಾರವನ್ ಮರಳಿತ್ತು. ರಾತ್ರಿ ಸಂಬಂಧಿಕರು ಕರೆ ಮಾಡಿದಾಗ ಆಹಾರ ಸೇವಿಸುತ್ತಿದ್ದ ಬಗ್ಗೆ ತಿಳಿದುಬಂದಿತ್ತು. ಅನಂತರ ಅವರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲವೆಂದು ಹೇಳಲಾಗುತ್ತಿದೆ. ವಾಹನದ ಎ.ಸಿಯಿಂದ ಅನಿಲ ಸೋರಿಕೆಯಾಗಿ ಇವರು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಶ್ವಾನದಳ, ಫಾರೆನ್ಸಿಕ್ ತಜ್ಞರು ತಲುಪಿ ತಪಾಸಣೆ ನಡೆಸಲಿದ್ದು ಅನಂತರವೇ ಸಾವಿಗೆ ಕಾರಣ ತಿಳಿಯಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.