ನಿವೃತ್ತ ಅಧ್ಯಾಪಕನ ಕೊಲೆ: ಆರೋಪಿಗಳಾದ ಬೆಳ್ಳಿಗೆ ನಿವಾಸಿ ತಂದೆ, ಪುತ್ರ 7 ದಿನ ಪೊಲೀಸ್ ಕಸ್ಟಡಿಗೆ
ಮುಳ್ಳೇರಿಯ: ನಿವೃತ್ತ ಅಧ್ಯಾಪಕನಾದ ಮಾವನನ್ನು ಹಾಡಹಗಲೇ ಕೊಲೆಗೈದ ಪ್ರಕರಣದಲ್ಲಿ ಸೆರೆಯಾದ ಬೆಳ್ಳಿಗೆ ವಡಂಬಳೆ ನಿವಾಸಿಗಳಾದ ಜ್ಯೋತಿಷ್ಯ ಹಾಗೂ ಪುತ್ರನನ್ನು ಏಳು ದಿವಸ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ವಡಂಬಳದ ರಾಘವೇಂದ್ರ ಕೆದಿಲ್ಲಾಯ (52), ಪುತ್ರ ಮುರಳೀಕೃಷ್ಣ (21) ಎಂಬಿವರನ್ನು ಧರ್ಮಸ್ಥಳ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ರಾಘವೇಂದ್ರ ಕೆದಿಲ್ಲಾಯರ ಪತ್ನಿ ವಿಜಯಲಕ್ಷ್ಮಿಯವರ ತಂದೆ ನಿವೃತ್ತ ಅಧ್ಯಾಪಕ ಬೆಳಾಲು ನಿವಾಸಿ ಬಾಲಕೃಷ್ಣ ಭಟ್ (83)ರನ್ನು ಕೊಲೆಗೈದ ಪ್ರಕರಣದಲ್ಲಿ ಇವರಿಬ್ಬರು ಆರೋಪಿಗಳಾಗಿದ್ದಾರೆ. ಆಗಸ್ಟ್ ೨೦ರಂದು ಬಾಲಕೃಷ್ಣ ಭಟ್ರನ್ನು ಬೆಳಾಲು ಸ್ವ-ಗೃಹ ಬಳಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿತ್ತು. ಇವರ ಪತ್ನಿ ಈ ಹಿಂದೆ ನಿಧನ ಹೊಂದಿದ್ದು, ಇವರ ಚಿನ್ನಾಭರಣ ಹಾಗೂ ಹಣವನ್ನು ರಾಘವೇಂದ್ರ ಕೆದಿಲ್ಲಾಯ ಆಗ್ರಹಿಸಿದ್ದನು. ಆದರೆ ಇದಕ್ಕೆ ಬಾಲಕೃಷ್ಣ ಭಟ್ ಸಿದ್ಧರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದ್ವೇಷದಿಂದ ಕೊಲೆ ನಡೆಸಿರುವುದಾಗಿ ಪತ್ತೆಹಚ್ಚಿ ತಂದೆ ಹಾಗೂ ಪುತ್ರನನ್ನು ಬಂಧಿಸಲಾಗಿದೆ. ಇವರನ್ನು ವಿವಿಧ ಕಡೆಗಳಿಗೆ ಕೊಂಡುಹೋಗಿ ತನಿಖೆ ನಡೆಸಲು ಧರ್ಮಸ್ಥಳ ಪೊಲೀಸರು ತೀರ್ಮಾನಿಸಿದ್ದಾರೆ.