ಪಡನ್ನಕ್ಕಾಡ್‌ನಿಂದ ಬಂಧಿಸಲ್ಪಟ್ಟ ಉಗ್ರ ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ಸದಸ್ಯ
ಹೊಸದುರ್ಗ: ಪಡನ್ನಕ್ಕಾಡ್ ನಿಂದ ಅಸ್ಸಾಂ ಪೊಲೀಸರು ಬಂಧಿಸಿದ ಉಗ್ರ ಎಂ.ಬಿ. ಮೊಹಮ್ಮದ್ ಶಾಬ್ ಶೇಖ್ (32) ಬಾಂಗ್ಲಾದೇಶದ ಪ್ರಜೆಯಾಗಿದ್ದು, ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆಯೊಂದರ ಸಕ್ರಿಯ ಸದಸ್ಯನಾಗಿರುವುದಾಗಿ ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.
ಬಂಧಿತ ಉಗ್ರ ಬಾಂಗ್ಲಾದೇಶದ ಧರಂಪುರ್ ಗ್ರಾಮದ ರಾಜ್ ಶಾಹಾ ಸಿಟಿ ನಿವಾಸಿಯಾಗಿದ್ದಾನೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ ಬಂದು ನಕಲಿ ಆಧಾರ್ ಕಾರ್ಡ್, ಪಾನ್‌ಕಾರ್ಡ್, ಭಾರತೀಯ ಪಾಸ್‌ಪೋರ್ಟ್, ಗುರುತುಚೀಟಿ ಇತ್ಯಾದಿಗಳನ್ನು ಸಂಪಾದಿಸಿದ್ದನು. ಈತ ೨೦೧೮ರಲ್ಲಿ ಕಾಸರಗೋಡಿಗೆ ಬಂದು ಚೆರ್ಕಳ, ಚಟ್ಟಂಚಾಲ್, ಕಳನಾಡು, ಉದುಮ ಮೊದಲಾದೆಡೆಗಳಲ್ಲಿ ವಾಸಿಸಿದ್ದನು. ನಂತರ ಹೊಸದುರ್ಗ ಪಡನ್ನಕ್ಕಾಡ್‌ನ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿದ್ದನು. ಅಲ್ಲಿಂದ ಆತನನ್ನು ನಿನ್ನೆ ಮುಂಜಾನೆ ಹೊಸದುರ್ಗ ಪೊಲೀಸರ ಸಹಾಯದೊಂದಿಗೆ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಪಡನ್ನಕ್ಕಾಡ್‌ನ ಕ್ವಾರ್ಟರ್ಸ್‌ನಲ್ಲಿ ಇತರ ನಾಲ್ಕು ಮಂದಿ ಆತನ ಜತೆ ವಾಸಿಸುತ್ತಿದ್ದರು. ಆದರೆ ಈ ನಾಲ್ವರು ವಲಸೆ ಕಾರ್ಮಿಕರ ಬಗ್ಗೆ ಆ ಕಟ್ಟಡದ ಮಾಲಕ ಪೊಲೀಸರಿಗೆ ನೀಡಿದ್ದ ಕಾರ್ಮಿಕರ ಪಟ್ಟಿಯಲ್ಲಿ ಈ ಉಗ್ರನ ಹೆಸರು ಒಳಗೊಂಡಿರಲಿಲ್ಲ. ಈತ ಇಲ್ಲಿ ಗಾರೆ ಕಾರ್ಮಿಕನಾಗಿ ದುಡಿಯುತ್ತಿದ್ದನು.
ಬಂಧಿತನ ಮೊಬೈಲ್ ಫೋನ್ ಪರಿಶೀಲಿಸಿದಾಗ ಆತ ಬಾಂಗ್ಲಾದೇಶ ಪ್ರಜೆಯಾಗಿರುವುದಾಗಿಯೂ ಅಲ್ಲಿನ ಭಯೋತ್ಪಾದಕ ಸಂಘಟನೆಯ ಸಕ್ರಿಯ ಸದಸ್ಯನಾಗಿರುವ ಕಳವಳಕಾರಿ ಮಾಹಿತಿ ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆಯೊಂದಿಗೆ ಇರುವ ನಂಟು. ಅಕ್ರಮವಾಗಿ ಭಾರತದೊಳಗ ನುಸುಳುವಿಕೆ, ನಕಲಿ ಭಾರತೀಯ ಪಾಸ್‌ಪೋರ್ಟ್ ತಯಾರಿಸಿದುದಕ್ಕೆ ಸಂಬಂಧಿಸಿ ಅಸ್ಸಾಂ ಪೊಲೀಸರು ಆತನ ವಿರುದ್ದ ಯುಎಪಿಎ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಆ ವೇಳೆ ಆತ ಅಸ್ಸಾಂನಲ್ಲಿ ನೆಲೆಸಿದ್ದನು. ತನ್ನ ಮೇಲೆ ಕೇಸು ದಾಖಲಿಸಿಕೊಂಡಿರು ವುದನ್ನು ತಿಳಿದ ಆತ ಅಲ್ಲಿಂದ ತಪ್ಪಿಸಿಕೊಂಡು ಕೇರಳಕ್ಕೆ ಬಂದು ಗಾರೆ ಕಾರ್ಮಿಕನ ಸೋಗಿನಲ್ಲಿ ನೆಲೆಸಿದ್ದನೆಂದು ತನಿಖಾ ತಂಡ ತಿಳಿಸಿದೆ.
ಕೇವಲ ಐದನೇ ತರಗತಿ ತನಕ ಕಲಿತಿರುವ ಈ ಉಗ್ರ ಅತ್ಯಾಧುನಿಕ ಅಪ್ಲಿಕೇಶನ್ ಒಳಗೊಂಡ ಮೊಬೈಲ್ ಫೋನ್ ಉಪಯೋಗಿಸುತ್ತಿದ್ದ ಮಾತ್ರವಲ್ಲ ಸೆಲ್ ಫೋನ್ ಉಪಯೋಗಿಸುವಿಕೆಯಲ್ಲೂ ಚತುರನಾಗಿದ್ದಾನೆ. ಕ್ವಾರ್ಟರ್ಸ್‌ನಲ್ಲಿ ರಾತ್ರಿಯಿಡೀ ಆತ ಮೊಬೈಲ್ ಫೋನ್‌ನಲ್ಲೇ ಮಾತನಾಡುತ್ತಿದ್ದ. ಆ ಬಗ್ಗೆ ಇತರ ಕಾರ್ಮಿಕರು ಪ್ರಶ್ನಿಸಿದಾಗ ನಾನು ನನ್ನ ಮನೆಯವರಲ್ಲಿ ಮಾತನಾಡುವುದಾಗಿ ತಿಳಿಸಿದ್ದನು. ಆದರೆ ಆತ ಹೀಗೆ ರಾತ್ರಿ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದುದು ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆಯ ಸದಸ್ಯರೊಂದಿಗೆ ಆಗಿತ್ತು ಎಂಬುವುದು ತನಿಖೆಯಲ್ಲಿ ಸ್ಪಷ್ಟಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂನ ಸ್ಪೆಷಲ್ ಟಾಸ್ಕ್ ಫೋರ್ಸ್ ಈತನಿಗಾಗಿ ಕಳೆದ ನಾಲ್ಕು ವರ್ಷಗಳಿಂದ ತೀವ್ರ ಶೋಧ ಆರಂಭಿಸಿತ್ತು. ಆತನನ್ನು ಕೊನೆಗೂ ಸೆರೆಹಿಡಿಯುವಲ್ಲಿ ಅಸ್ಸಾಂ ಪೊಲೀಸರು ಸಫಲರಾಗಿದ್ದಾರೆ. ಬಂಧಿತನನ್ನು ಪೊಲೀಸರು ನಿನ್ನೆ ಹೊಸದುರ್ಗ ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ಪ್ರಥಮ)ದಲ್ಲಿ ಹಾಜರುಪಡಿಸಿದ ನಂತರ ಮಂಗಳೂರಿನಿಂದ ವಿಮಾನ ಮೂಲಕ ಅಸ್ಸಾಂಗೆ ಕರೆದೊಯ್ದಿದ್ದಾರೆ.
ಉಗ್ರ ವಾಸಿಸಿದ್ದ ಕ್ವಾರ್ಟರ್ಸ್‌ಗಳನ್ನು ಕೇಂದ್ರೀಕರಿಸಿ ತನಿಖೆ
ಕಾಸರಗೋಡು: ಪಡನ್ನಕ್ಕಾಡ್‌ನ ಕ್ವಾರ್ಟರ್ಸ್‌ನಿಂದ ಅಸ್ಸಾಂ ಪೊಲೀಸರು ಬಂಧಿಸಿದ ಬಾಂಗ್ಲಾದೇ ಶದ ಉಗ್ರ ಮೊಹಮ್ಮದ್ ಶಾಬ್ ಶೇಖ್ (32) ವಾಸಿಸುತ್ತಿದ್ದ ಎಲ್ಲಾ ಕ್ವಾರ್ಟರ್ಸ್‌ಗಳನ್ನು ಕೇಂದ್ರೀಕರಿಸಿ ಜಿಲ್ಲೆಯ ಪೊಲೀಸರು ವಿಶೇಷ ತನಿಖ ಆರಭಿಸಿದ್ದಾರೆ.
ಇದರಂತೆ ಆತ ಈ ಹಿಂದೆ ವಾಸಿಸಿದ್ದ ಚೆರ್ಕಳ, ಚಟ್ಟಂಚಾಲ್, ಕಳನಾಡು, ಪಳ್ಳಿಕ್ಕರೆ, ಉದುಮ ಮತ್ತು ಬಳಿಕ ಸೆರೆಗೊಳಗಾದ ಪಡನ್ನಕ್ಕಾಡ್ ಕ್ವಾರ್ಟರ್ಸ್‌ಗಳನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಶ್ಚಿಮ ಬಂಗಾಳ ನಿವಾಸಿ ಸೋಗಿನಲ್ಲಿ ಈತ ಈ ಕ್ವಾರ್ಟರ್ಸ್‌ಗಳಲ್ಲಿ ವಾಸಿಸುತ್ತಿದ್ದ. ಅಲ್ಲಿ ಆತನ ಜತೆ ವಾಸಿಸುತ್ತಿದ್ದವರು ಅವರೊಂದಿಗೆ ಹೊಂದಿರುವ ನಂಟು, ಆತನನ್ನು ಕೆಲಸಕ್ಕೆ ಸೇರ್ಪಡೆಗೊಳಿಸಿದ ಕಾರ್ಮಿಕ ಗುತ್ತಿಗೆದಾರನನ್ನು ವಿಚಾರಿಸಿ ಅವರ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಮಾತ್ರವಲ್ಲ ಈ ಉಗ್ರನ ಜೊತೆ ಬಾಂಗ್ಲಾದೇಶದ ಇತರ ಯಾರಾದರೂ ಇಲ್ಲಿ ವಾಸಿಸುತ್ತಿದ್ದರೇ ಎಂಬ ಬಗ್ಗೆಯೂ ಪೊಲೀಸರು ಇನ್ನೊಂದೆಡೆ ವಿಶೇಷ ತನಿಖೆ ಆರಂಭಿಸಿದ್ದಾರೆ.