ಪತ್ವಾಡಿಯಲ್ಲಿ ಗಲ್ಫ್ ಉದ್ಯೋಗಿ ಮನೆಯಿಂದ ನಗ-ನಗದು ಕಳವು ತನಿಖೆ ತೀವ್ರ; ಬೆರಳಚ್ಚು ತಜ್ಞರು, ಶ್ವಾನದಳದಿಂದ ತಪಾಸಣೆ

ಉಪ್ಪಳ: ಪತ್ವಾಡಿ ನಿವಾಸಿ ಗಲ್ಫ್ ಉದ್ಯೋಗಿಯಾದ ಅಬ್ದುಲ್ಲ ಎಂಬವರ ಮನೆಯಿಂದ ನಡೆದ ಕಳವು ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನಿನ್ನೆ  ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಲುಪಿ ತಪಾಸಣೆ ನಡೆಸಿದ್ದಾರೆ.

ಮನೆಯಿಂದ ನಾಲ್ಕೂವರೆ ಪವನ್ ಚಿನ್ನಾಭರಣ, ಒಂದು ಲಕ್ಷ ರೂಪಾಯಿ ಹಾಗೂ 14 ಸಾವಿರ ರೂಪಾಯಿ ಬೆಲೆಬಾಳುವ ಇಲೆಕ್ಟ್ರಾನಿಕ್ ಸಾಮಗ್ರಿಗಳು ಕಳವಿಗೀಡಾಗಿದೆ. ಮನೆಯ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಈ ಸೊತ್ತುಗಳನ್ನು ದೋಚಿದ್ದಾರೆ. ಅಬ್ದುಲ್ಲ ಗಲ್ಫ್‌ನಲ್ಲಿದ್ದಾರೆ.

ಇವರ ಪತ್ನಿ ಹಾಗೂ ಮಕ್ಕಳು ಮಾತ್ರವೇ ಮನೆಯಲ್ಲಿದ್ದಾರೆ. ಇವರು ನಾಲ್ಕು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿದ್ದರು. ನಿನ್ನೆ ಬೆಳಿಗ್ಗೆ  ಮನೆಗೆ ಮರಳಿ ಬಂದಾಗ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಈ ಬಗ್ಗೆ  ಅವರು ನೀಡಿದ ದೂರಿನಂತೆ ಇನ್‌ಸ್ಪೆಕ್ಟರ್  ರಾಜೀವ್ ಕುಮಾರ್ ನೇತೃತ್ವದ ಪೊಲೀಸರು ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಸಮೀಪದ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಕಂಡುಬಂದ ದೃಶ್ಯಗಳನ್ನು ಕೇಂದ್ರೀಕರಿಸಿ ತನಿಖೆ  ಮುಂದುವರಿಯುತ್ತಿದೆ.

ಅದೇ ರೀತಿ ಮನೆಯಿಂದ ಲಭಿಸಿದ ಬೆರಳಚ್ಚುಗಳ ಪರಿಶೀಲನೆ ನಡೆಯುತ್ತಿದೆ. ಅವುಗಳ ಆಧಾರದಲ್ಲಿ ಕಳ್ಳರನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆಯೆಂದು ಪೊಲೀಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page