ಪಿಸ್ತದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಮೃತ್ಯು

ಕುಂಬಳೆ: ಪಿಸ್ತದ ಸಿಪ್ಪೆ ಗಂಟಲಲ್ಲಿ ಸಿಲುಕಿ ಎರಡು ವರ್ಷ ಪ್ರಾಯದ ಮಗು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕುಂಬಳೆ ಭಾಸ್ಕರನಗರದ ಅನ್ವರ್ ಹಾಗೂ ಮೆಹರೂಫ ದಂಪತಿಯ ಪುತ್ರ ಅನಸ್ ಮೃತಪಟ್ಟ ಮಗುವಾಗಿದೆ. ಶನಿವಾರ ಸಂಜೆ  ಉಪ್ಪಳದಲ್ಲಿರುವ ಮೆಹರೂಫರ ಮನೆಯಲ್ಲಿ ಮಗು ಪಿಸ್ತದ ಸಿಪ್ಪೆಯನ್ನು ತಿಂದಿದ್ದು, ಅದು ಗಂಟಲಲ್ಲಿ ಸಿಲುಕಿದಾಗ ಮನೆಯವರು ಕೈ ಹಾಕಿ ಒಂದು ತುಂಡು ಸಿಪ್ಪೆಯನ್ನು ಹೊರ ತೆಗೆದಿದ್ದರು. ಬಳಿಕ ಮಗುವನ್ನು ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತು. ತಪಾಸಣೆಯಲ್ಲಿ ಪಿಸ್ತದ ಸಿಪ್ಪೆಯ ಉಳಿದ ಭಾಗವನ್ನು ಪತ್ತೆಹಚ್ಚಲಾಗಿಲ್ಲ. ಇದರಿಂದ ಸಮಸ್ಯೆ ಇಲ್ಲವೆಂದು ತಿಳಿಸಿ ವೈದ್ಯರು ಮನೆಗೆ ಕಳುಹಿಸಿದ್ದರು.

ನಿನ್ನೆ ಮುಂಜಾನೆ ಉಸಿರಾಟ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ದಾರಿ ಮಧ್ಯೆ ಸಾವು ಸಂಭವಿಸಿದೆ. ಮಗುವಿನ ತಂದೆ ಅನ್ವರ್ ಒಂದು ವಾರ ಹಿಂದೆಯಷ್ಟೇ ಗಲ್ಫ್‌ಗೆ ತೆರಳಿದ್ದರು. ವಿಷಯ ತಿಳಿದು ಅವರು ಊರಿಗೆ ಮರಳಿದ್ದಾರೆ. ಮೃತ ಮಗು ತಂದೆ, ತಾಯಿ, ಸಹೋದರಿ ಆಯಿಷು ಮೊದಲಾದವರನ್ನು ಅಗಲಿದ್ದಾನೆ.

RELATED NEWS

You cannot copy contents of this page