ಪುಟ್ಟ ಮಗುವಿನ ಕುತ್ತಿಗೆಯಿಂದ ಕಳವುಗೈದ ಚಿನ್ನದ ಸರವನ್ನು ನುಂಗಿದ ಕಳ್ಳಸರ ಹೊರಬರಲು ಪೊಲೀಸರು ಕಾದು ಕುಳಿತದ್ದು ಮೂರುದಿನ
ಪಾಲಕ್ಕಾಡ್: ಪುಟ್ಟ ಮಗುವಿನ ಕುತ್ತಿಗೆಯಿಂದ ಚಿನ್ನದ ಸರವನ್ನು ಕಳವುಗೈದ ಕಳ್ಳನನ್ನು ನಾಗರಿಕರು ಸೆರೆಹಿಡಿಯುವುದರೊಂದಿಗೆ ಅದನ್ನು ಆತ ನುಂಗಿದ್ದು, ಅದು ಲಭಿಸಲು ಪೊಲೀಸರು ಮೂರು ದಿನಗಳ ಕಾಲ ಕಾಯಬೇಕಾಗಿ ಬಂದ ಪ್ರಸಂಗವೊಂದು ನಡೆದಿದೆ. ಆಲತ್ತೂರು ಬಳಿಯ ಮೇಲಾರ್ ಕೋಡ್ ಎಂಬಲ್ಲಿ ನಡೆದ ಉತ್ಸವ ಕಾರ್ಯಕ್ರಮದಲ್ಲಿ ಕಳೆದ ಆದಿತ್ಯವಾರ ಘಟನೆ ನಡೆದಿದೆ. ಪಟ್ಟಂಚೇರಿ ನಿವಾಸಿ ವಿನೋದ್ ಎಂಬವರ ಎರಡೂವರೆ ವರ್ಷ ಪ್ರಾಯದ ಮಗಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಮಧುರೈ ನಿವಾಸಿಯಾದ ಮುತ್ತಪ್ಪನ್ ಎಂಬಾತ ಕಳವು ನಡೆಸಿದ್ದನು. ವಿಷಯ ತಿಳಿದ ನಾಗರಿಕರು ಆತನನ್ನು ಸೆರೆಹಿಡಿದಿದ್ದು, ಅಷ್ಟರಲ್ಲಿ ಸರವನ್ನು ಕಳ್ಳ ನುಂಗಿದ್ದಾನೆ. ಪೊಲೀಸರು ಆತನನ್ನು ತನಿಖೆಗೊಳಪಡಿಸಿದಾಗ ಸರವನ್ನು ಕಳವು ನಡೆಸಿಲ್ಲವೆಂದೇ ತಿಳಿಸಿದ್ದನು. ಇದರಿಂದ ಎಕ್ಸ್‌ರೇ ತೆಗೆದು ನೋಡಿದಾಗ ಮುತ್ತಪ್ಪನ್‌ನ ಹೊಟ್ಟೆಯಲ್ಲಿ ಸರ ಕಾಣಿಸಿದೆ. ಬಳಿಕ ಸರವನ್ನು ಹೊರತೆಗೆಯಲೆಂದು ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ದಿನಂಪ್ರತಿ ಆತನಿಗೆ ಭಾರೀ ಪ್ರಮಾಣದಲ್ಲಿ ರೋಬಸ್ಟ್, ಮೈಸೂರು ಬಾಳೆಹಣ್ಣು ನೀಡಲಾಯಿತು. ಆದರೂ ಸರ ಹೊರಗೆ ಬಂದಿಲ್ಲ. ಇದರಿಂದ ಮೂರು ದಿನಗಳ ಕಾಲ ಕಾದು ನಿಂತ ಪೊಲೀಸರು ಇನ್ನೂ ಹೊರಬರದಿದ್ದರೆ ಎಂಡೋಸ್ಕೋಪಿ ಮೂಲಕ ಹೊರ ತೆಗೆಯಲು ನಿರ್ಧರಿಸಿದ್ದರು. ಈ ಮಧ್ಯೆ ಸರ ಹೊರಬಂತು. ಮಗುವಿನ ಕುತ್ತಿಗೆಯಿಂದ ಕಳವಿಗೀಡಾದ ಸರ ಅದುವೇ ಎಂದು ಮಾಲಕನಿಗೆ ತೋರಿಸಿ ಖಚಿತಪಡಿಸಿದಬಳಿಕ ಆರೋಪಿಯನ್ನು ಬಂಧಿಸಲಾಯಿತು.