ಪೆರಿಯಾದಲ್ಲಿ ಚಿರತೆ ಭೀತಿ: ಕೇಂದ್ರೀಯ ವಿ.ವಿ ಪರಿಸರದಲ್ಲಿ ರಾತ್ರಿ ಕರ್ಫ್ಯೂ ಜ್ಯಾರಿ
ಕಾಸರಗೋಡು: ಬೇಡಗಂ, ಅಂಬಲ ತರ, ಕಾರಡ್ಕ ಮೊದಲಾದೆಡೆಗಳಲ್ಲಿ ಇತ್ತೀಚೆಗಿನ ಕೆಲವು ದಿನಗಳಿಂದ ಚಿರತೆ ಭೀತಿ ಎದುರಾಗಿದ್ದು ಅದರಲ್ಲಿ ಒಂದು ಚಿರತೆಯನ್ನು ಬೇಡಡ್ಕ ಸಮೀಪದ ಕೊಳತ್ತೂರಿನಲ್ಲಿ ಅರಣ್ಯ ಇಲಾಖೆಯ ಬೋನಿನಲ್ಲಿ ಸಿಲುಕಿಕೊಂಡು ನಂತರ ಅರಣ್ಯಪಾಲಕರು ಅದನ್ನು ಜಿಲ್ಲೆಯ ಗಡಿ ಪ್ರದೇಶದ ಅರಣ್ಯಕ್ಕೆ ಬಿಟ್ಟ ಬೆನ್ನಲ್ಲೇ ಈಗ ಪೆರಿಯ ಮತ್ತು ಪರಿಸರ ಪ್ರದೇಶಗಳಲ್ಲಿ ಚಿರತೆಗಳು ಪ್ರತ್ಯಕ್ಷಗೊ ಳ್ಳತೊಡಗಿದೆ. ಅದು ಈ ಪ್ರದೇಶದ ಜನರನ್ನು ಭೀತಿಗೊಳಪಡಿಸಿದೆ.
ಪೆರಿಯಾದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ ಪರಿಸರದಲ್ಲೂ ಚಿರತೆ ಕಂಡಿರುವುದಾಗಿ ಆ ಪ್ರದೇಶದವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ರಾತ್ರಿ ವೇಳೆ ಕರ್ಫ್ಯೂ ಜ್ಯಾರಿಗೊಳಿಸಲಾಗಿದೆ. ಜಿಲ್ಲೆಯ ಅರಣ್ಯಾಧಿಕಾರಿ (ಡಿಎಫ್‌ಒ) ನೀಡಿದ ನಿರ್ದೇಶದಂತೆ ರಾತ್ರಿ ೮ರಿಂದ ಬೆಳಿಗ್ಗೆ ೭ರ ತನಕದ ಅವಧಿಯಲ್ಲಿ ಇಲ್ಲಿ ಕರ್ಫ್ಯೂ ಜ್ಯಾರಿಗೊಳಿಸಲಾಗಿದೆ.
ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯಾದ ತೋಟಗಾರಿಕಾ ವಲಯದ ಮಧ್ಯ ಭಾಗದಲ್ಲೇ ನೆಲೆಗೊಂಡಿದೆ. ಇದರ ಸುತ್ತಲೂ ಕಾಡು ಆವರಿಸಿಕೊಂಡಿದೆ. ಮಾತ್ರವಲ್ಲ ಬೃಹತ್ ಮರಗಳು ಬೆಳೆದು ನಿಂತಿದೆ. ವಿ.ವಿಯಲ್ಲಿ ಸುಮಾರು ಎರಡು ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ವಿವಿ ಕ್ಯಾಂಪಸ್‌ನ ಮರಗಳು ಆವರಿಸಿಕೊಂಡಿರುವ ಸ್ಥಳಗಳಿಗೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಹೋಗಬಾರದು, ವಿವಿ ಕ್ಯಾಂಪಸ್ ನೊಳಗೆ ನಾಯಿಗಳು, ಬೆಕ್ಕುಗಳನ್ನು ತಿನ್ನಲು ಆಹಾರ ನೀಡಬಾರದೂ, ಅವುಗಳನ್ನು ವಿವಿ ಕ್ಯಾಂಪಸ್‌ನೊಳಗಿಂದ ಹೊರಕ್ಕೆ ಓಡಿಸಬೇಕೆಂದೂ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿದ್ಯಾರ್ಥಿಗಳಲ್ಲಿ ಮತ್ತು ಸಿಬ್ಬಂದಿ ವರ್ಗದವರಿಗೆ ಅರಣ್ಯಪಾಲಕರು ನಿರ್ದೇಶ ನೀಡಿದ್ದಾರೆ. ಮಾತ್ರವಲ್ಲ ವಿವಿ ಕ್ಯಾಂಪಸ್‌ನೊಳಗೆ ರಾತ್ರಿ ವೇಳೆ ಸುತ್ತಾಡಬಾರದು. ಒಬ್ಬಂಟಿಯಾಗಿ ರಾತ್ರಿ ಕ್ಯಾಂಪಸ್‌ನಿಂದ ಹೊರಗಿಳಿಯಬಾರದು. ತುರ್ತು ಅಗತ್ಯಗಳಿಗೆ ಹೊರಗೆ ಹೋಗಬೇಕಾದ ಅನಿವಾರ್ಯತೆ ಉಂಟಾದಲ್ಲಿ ಆ ಬಗ್ಗೆ ಸೆಕ್ಯೂರಿಟಿ ರೂಂಗೆ ಮೊದಲು ಮಾಹಿತಿ ನೀಡಬೇಕೆಂಬ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
ಪೆರಿಯಾ ಪೇಟೆ ಪರಿಸರದ ಪೂಕ್ಕಳ, ಮೀಂಙೋತ್, ನಾರ್ಕಳದಲ್ಲಿ ಚಿರತೆಗಳು ಪ್ರತ್ಯಕ್ಷಗೊಂಡಿದೆ. ಮಾತ್ರವಲ್ಲ ಇಲ್ಲಿನ ಪೂಕಳಂ, ಕಾಲಿಚ್ಚಾಮರತ್ತಿಂ ಗಾಲ್ ಮೊದಲಾದೆಡೆಗಳಲ್ಲಿ ಹಲವರು ಚಿರತೆಗಳನ್ನು ಕಂಡಿದ್ದಾರೆ. ಕಮ್ಮಡತ್ತ್‌ಪಾರ ಬಸ್ ತಂಗುದಾಣದ ಬಳಿ ನಾಯಿಯೊಂದು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದನ್ನು ಚಿರತೆ ಕೊಂದಿರಬಹುದೆಂದು ಶಂಕಿ ಸಲಾಗುತ್ತಿದೆ. ವಿಷಯ ತಿಳಿದ ಅರಣ್ಯ ಪಾಲಕರು ಈ ಪ್ರದೇಶದಲ್ಲಿ ಊರವರ ಸಹಾಯದಿಂದ ವ್ಯಾಪಕ ಶೋಧ ಆರಂಭಿಸಿದ್ದಾರೆ.