ಪೆರಿಯ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣ: ಪರೋಲ್‌ಗಾಗಿ ಅರ್ಜಿ ಸಲ್ಲಿಸಿದ ಶಿಕ್ಷೆಗೊಳಗಾದ ಇಬ್ಬರು ಆರೋಪಿಗಳು
ಕಾಸರಗೋಡು: ಪೆರಿಯ ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತ ರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್‌ರನ್ನು ಕೊಲೆಗೈದ ಪ್ರಕರಣದಲ್ಲಿ ಎರ್ನಾಕುಳಂನ ಸಿಬಿಐಯ ವಿಶೇಷ ನ್ಯಾಯಾಲಯ ಅವಳಿ ಜೀವಾವಧಿ ಸಜೆ ವಿಧಿಸಿದ್ದ ಆರೋಪಿಗಳ ಪೈಕಿ ಇಬ್ಬರು ಪರೋಲ್ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಸ್ತುತ ಕೊಲೆ ಪ್ರಕರಣದ ಎಂಟನೇ ಆರೋಪಿ ಸುಭೀಶ್ ವೆಳುತ್ತೋಳಿ ಮತ್ತು 15ನೇ ಆರೋಪಿ ಎ. ಸುರೇಂದ್ರನ್ ಅಲಿಯಾಸ್ ವಿಷ್ಣು ಪರೋಲ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವಳಿ ಜೀವಾವಧಿ ಶಿಕ್ಷೆಗೊಳಗಾದ ಈ ಇಬ್ಬರು ಈಗ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇವರೂ ಸೇರಿದಂತೆ ಈ ಕೊಲೆ ಪ್ರಕರಣದ ಒಟ್ಟು 24 ಆರೋಪಿಗಳ ಪೈಕಿ 10 ಮಂದಿಗೆ ಎರ್ನಾಕುಳಂ ಸಿಬಿಐ ನ್ಯಾಯಾಲಯ ಜನವರಿ ೩ರಂದು ಅವಳಿ ಜೀವಾವಧಿ ಸಜೆ ವಿಧಿಸಿತ್ತು. 10 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಬಾಕಿ ನಾಲ್ಕು ಮಂದಿ ಆರೋಪಿಗಳಿಗೆ ನ್ಯಾಯಾಲ ಯ ತಲಾ ಐದು ವರ್ಷ ಶಿಕ್ಷೆ ವಿಧಿಸಿತ್ತು. ಈ ನಾಲ್ಕು ಮಂದಿಗೆ ನಂತರ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಅವಳಿ ಜೀವಾವಧಿ ಶಿಕ್ಷೆಗೊಳಗಾಗಿ ಜೈಲು ಸೇರಿ ಒಂದೂವರೆ ತಿಂಗಳೊಳ ಗಾಗಿ ಇಬ್ಬರು ಆರೋಪಿಗಳು ಪರೋಲ್‌ಗಾಗಿ ಅರ್ಜಿ ಸಲ್ಲಿಸಿದ್ದು, ಅದರಿಂದಾಗಿ ಅವರಿಗೆ ಪರೋಲ್ ಲಭಿಸಬಹುದೇ ಎಂಬುವುದನ್ನು ಕಾದು ನೋಡಬೇ ಕಾಗಿದೆ. ಕೊಲೆ ಪ್ರಕರಣದಲ್ಲಿ 10 ಮಂದಿ ಆರೋಪಿಗಳನ್ನು ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿರುವ ಹಿನ್ನೆಲೆಯಲ್ಲಿ ಈ ಕೊಲೆ ಪ್ರಕರಣದ ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಕೊಲೆಗೈಯ್ಯಲ್ಪಟ್ಟ ಕೃಪೇಶ್ ಮತ್ತು ಶರತ್‌ಲಾಲ್‌ರ ಮನೆಯವರು ಇನ್ನೊಂದೆಡೆ ರಂಗಕ್ಕಿಳಿದಿದ್ದಾರೆ.
2019 ಫೆ. 17ರಂದು ರಾತ್ರಿ 7.50ಕ್ಕೆ ಪೆರಿಯ ತಾನಿತ್ತೋಡು ಕುರಾಂಗರ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಕೃಪೇಶ್ ಹಾಗೂ ಶರತ್‌ಲಾಲ್‌ರನ್ನು ಮಾರಕಾ ಯುಧ ಗಳಿಂದ ಆಕ್ರಮಿಸಿ ಬರ್ಭರವಾಗಿ ಕೊಲೆಗೈದ ಘಟನೆ ನಡೆದಿತ್ತು.