ಪೊಲೀಸರನ್ನು ಕಂಡು ಓಡಲೆತ್ನಿಸಿದ ಯುವಕನ ಕೈಯಲ್ಲಿ ಎಂಡಿಎಂಎ ಪತ್ತೆ
ಕಾಸರಗೋಡು: ರಾತ್ರಿ ವೇಳೆ ಪೊಲೀಸರನ್ನು ಕಂಡು ಸೈಕಲ್ ಉಪೇಕ್ಷಿಸಿ ಪರಾರಿಯಾಗಲೆತ್ನಿಸಿದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದು ತಪಾಸಣೆಗೊಳಪಡಿಸಿದಾಗ ಆತನ ಕೈಯಲ್ಲಿ ೩.೫೯ ಗ್ರಾಂ ಮಾದಕ ವಸ್ತುವಾದ ಎಂಡಿಎಂಎ ಪತ್ತೆಯಾಗಿದೆ. ಅದರಂತೆ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಸಮೀಪದ ಶಿರಿಯ ಠಾಣಾ ಹೌಸ್ನ ಬಿ.ಎ. ಸಲ್ಮಾನ್ (23) ಬಂಧಿತ ಯುವಕ. ಈತ ನಿನ್ನೆ ಮುಂಜಾನೆ ಸೈಕಲ್ನಲ್ಲಿ ಕೋಟಿಕುಳಂ ರೈಲ್ವೇ ಗೇಟ್ ಬಳಿ ಸಾಗುತ್ತಿದ್ದಾಗ ಅಲ್ಲಿ ಪೊಲೀಸರನ್ನು ಕಂಡು ಹೆದರಿ ಸೈಕಲನ್ನು ಅಲ್ಲೇ ಬಿಟ್ಟು ಪರಾರಿಯಾಗಲೆತ್ನಿಸಿದನೆಂದೂ, ಇದರಿಂದ ಶಂಕೆಗೊಂಡು ಆತನನ್ನು ವಶಕ್ಕೆ ತೆಗೆದುಕೊಂಡು ದೇಹ ತಪಾಸಣೆ ನಡೆಸಿದಾಗ ಆತನ ಕೈಯಲ್ಲಿ ಎಂಡಿಎಂಎ ಪತ್ತೆಯಾಗಿದೆ. ಅದಕ್ಕೆ ಸಂಬಂಧಿಸಿ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬೇಕಲ ಪೊಲೀಸ್ ಠಾಣೆ ಎಸ್ಐ ಬಾವ ಅಕ್ಕರಕ್ಕಾಲ್ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ.
ಆರೋಪಿಯ ಕೈಯಲ್ಲಿದ್ದ ಮೊಬೈಲ್ ಫೋನ್, ಪರ್ಸ್, ಪಾನ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಆತ ಚಲಾಯಿಸುತ್ತಿದ್ದ ಸೈಕಲನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನನ್ನು ನಂತರ ಹೊಸದುರ್ಗ ಪ್ರಥಮದರ್ಜೆ ಮೆಜಿಸ್ಟ್ರೇಟ್ (೨) ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.