ಪೋಕ್ಸೋ ಪ್ರಕರಣಗಳಲ್ಲಿ ಗಣನೀಯ ಏರಿಕೆ: ಅಧ್ಯಾಪಕರ ಸಹಾಯದಿಂದ ಮಕ್ಕಳಿಗೆ ತಿಳುವಳಿಕೆ ಮೂಡಿಸಲು ಯೋಜನೆ
ಕಾಸರಗೋಡು: ಮಕ್ಕಳು ಲೈಂಗಿಕ ಕಿರುಕುಳಕ್ಕೊಳಗಾಗುವುದನ್ನು ತಡೆಗಟ್ಟಲು ಅಧ್ಯಾಪಕರನ್ನು ಬಳಸಿಕೊಂಡು ತಿಳುವಳಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸರಕಾರ ನಿರ್ಧರಿಸಿದೆ. ರಾಜ್ಯದಲ್ಲಿ ದಾಖಲಾಗುವ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಪರಿಗಣಿಸಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ಇತರರು ಯಾವ ಉದ್ದೇಶದಿಂದ ದೇಹವನ್ನು ಸ್ಪರ್ಶಿಸುತ್ತಾರೆ ಎಂದು ಮಕ್ಕಳಿಗೆ ಮನವರಿಕೆ ಮಾಡಬೇಕಾಗಿದೆ.
ಮಕ್ಕಳು ಇತರರಿಂದ ತಮಗುಂಟಾಗುವ ಕೆಟ್ಟ ಅನುಭವಗಳ ಕುರಿತು ಅಧ್ಯಾಪಕರು, ಅಧ್ಯಾಪಿಕೆಯರು ಹಾಗೂ ಚೈಲ್ಡ್ ಲೈನ್ ಕಾರ್ಯಕರ್ತರಲ್ಲಿ ತಿಳಿಸುತ್ತಿರುವುದು ಸಾಮಾನ್ಯವಾಗಿದೆ. ಹೀಗೆ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುವುದರಿಂದ ದಾಖಲಾಗುವ ಕೇಸುಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ಸರಾಸರಿ 4,500 ಪೋಕ್ಸೋ ಕೇಸುಗಳು ದಾಖಲಾಗುತ್ತಿತ್ತು. ಆದರೆ ಈ ವರ್ಷದ ಮೊದಲ ಎರಡು ತಿಂಗಳಲ್ಲಿ 888 ಕೇಸುಗಳನ್ನು ದಾಖಲಿಸಲಾಗಿದೆ.
ಕೆಲವೊಮ್ಮೆ ಮಕ್ಕಳು ಮನೆಯವರಲ್ಲಿ ತಿಳಿಸಿದರೂ ಅದನ್ನು ಬಹಿರಂಗಪಡಿಸದೆ ಮುಚ್ಚಿಡುವುದೂ ಇದೆ. ಇದೇ ವೇಳೆ ಪೋಕ್ಸೋ ಪ್ರಕರಣಗಳ ಕುರಿತು ಅಧ್ಯಾಪಕರ ಪೈಕಿ ಹಲವರಿಗೆ ತಿಳುವಳಿಕೆಯಿಲ್ಲವೆಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕುರಿತಾಗಿ ಅಧ್ಯಾಪಕರಿಗೆ ತರಗತಿ ನಡೆಸಲಿರುವ ಕ್ರಮಗಳಿಗೆ ಪೊಲೀಸ್ ಇಲಾಖೆ ಯೋಜನೆ ರೂಪಿಸುತ್ತಿದೆ. ಇದು ಶಿಕ್ಷಣ ಇಲಾಖೆ ಜ್ಯಾರಿಗೊಳಿಸುವ ಯೋಜನೆಗಳ ಹೊರತಾಗಿದೆ.