ಪ್ಲಸ್‌ವನ್ ಪರೀಕ್ಷೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪ್ಲಸ್‌ಟು ವಿದ್ಯಾರ್ಥಿನಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಪ್ಲಸ್‌ವನ್ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಅಲ್ಪಹೊತ್ತಿನಲ್ಲೇ ಪ್ಲಸ್‌ಟು ವಿದ್ಯಾರ್ಥಿನಿಯೋರ್ವೆ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಗಾಡಿಗುಡ್ಡೆ ಬಳಿಯ ಮೊಟ್ಟ ಕುಂಜ ನಿವಾಸಿ ಶಾಂತಪ್ಪ ಪೂಜಾರಿ ಎಂಬವರ ಪುತ್ರಿಯೂ, ಮುಳ್ಳೇರಿಯ ಶಾಲೆಯ ಪ್ಲಸ್‌ಟು ವಿದ್ಯಾರ್ಥಿನಿಯಾದ ಮನ್ಮಿತ (17) ಎಂಬಾಕೆ ಮೃತಪಟ್ಟಿದ್ದಾಳೆ. ನಿನ್ನೆ ಶಾಲೆಗೆ ತೆರಳಿದ್ದ ಸಹೋದರ ಧನುಷ್ ಸಂಜೆ ಮನೆಗೆ ಮರಳಿ ಬಂದಾಗ ಮನ್ಮಿತ ಅಡುಗೆ ಕೋಣೆಯೊಳಗೆ ಶಾಲು ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳ. ಕೂಡಲೇ ಸ್ಥಳೀಯರು ತಲುಪಿ ಬಾಲಕಿಯನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯ ಲಾಗಿದೆ. ನಿನ್ನೆ ಮಧ್ಯಾಹ್ನ ಬಳಿಕ ಪ್ಲಸ್ ವನ್ ಪರೀಕ್ಷೆ ಫಲಿತಾಂಶ ಪ್ರಕಟ ಗೊಂಡಿತ್ತು. ಮನ್ಮಿತ ಕೆಲವು ವಿಷಯಗಳಲ್ಲಿ ಅನುತ್ತೀರ್ಣಗೊಂ ಡಿದ್ದಳೆನ್ನಲಾಗಿದೆ. ಇದರಿಂದ ಮನನೊಂದು ಆಕೆ ನೇಣು ಬಿಗಿದು ಸಾವಿಗೀಡಾಗಿರಬಹುದೇ ಎಂದು ಸಂಶಯಿಸಲಾಗುತ್ತಿದೆಯೆಂದು ಪೊಲೀಸ್ ಮೂಲಗಳು ತಿಳಿಸುತ್ತಿವೆ.

ಘಟನೆಗೆ ಸಂಬಂಧಿಸಿ ಸಂಬಂಧಿಕೆ ವೇದಾವತಿ ಎಂಬವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಮೃತಳು ತಂದೆ, ತಾಯಿ ಲೀಲಾವತಿ, ಸಹೋದರ  ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.

ನೂತನ ಶೈಕ್ಷಣಿಕ ವರ್ಷ ಆರಂಭಗೊಂಡ ದಿನವೇ ವಿದ್ಯಾರ್ಥಿನಿ ಸಾವಿಗೀಡಾದ ಘಟನೆ ಶಾಲೆ ಹಾಗೂ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

You cannot copy contents of this page