ಫ್ಲಾಟ್‌ನೊಳಗೆ ಸಿಲುಕಿದ ಮಗು : ಆತಂಕ ಪರಿಹರಿಸಿದ ಅಗ್ನಿಶಾಮಕ ದಳ
ಉಪ್ಪಳ: ಬಹುಮಹಡಿಯ ಫ್ಲಾಟ್‌ನೊಳಗೆ 1 ವರ್ಷ 8 ತಿಂಗಳ ಮಗುವೊಂದು ಸಿಲುಕಿಕೊಂಡು ತೀವ್ರ ಆತಂಕ ಎದುರಾಗಿದ್ದು, ಇದರಿಂದ ಅಗ್ನಿಶಾಮಕದಳ ತಲುಪಿ ರಕ್ಷಿಸಿದ ಘಟನೆ ನಡೆದಿದೆ.
ಉಪ್ಪಳ ಗೇಟ್ ಬಳಿಯ ಫ್ಲಾಟ್ ವೊಂದರ ನಾಲ್ಕನೇ ಮಹಡಿಯಲ್ಲಿ ಈ ಘಟನೆ ನಡೆದಿದೆ. ತಾಯಿ ಹಾಗೂ ಮಗು ಫ್ಲಾಟ್‌ನ ಹೊರಗಿದ್ದರು. ಇದೇ ವೇಳೆ ತಾಯಿಗೆ ತಿಳಿಯದೆ ಮಗು ಫ್ಲಾಟ್‌ನೊಳಗೆ ತೆರಳಿ ಬಾಗಿಲು ಹಾಕಿ ಚಿಲಕ ಜಡಿದಿತ್ತು. ಇದರಿಂದ ಬಾಗಿಲು ತೆಗೆಯಲಾಗದೆ ತಾಯಿ ಬೊಬ್ಬೆ ಹಾಕಿದ್ದು, ಇದರಿಂದ ಸ್ಥಳೀಯರು ತಲುಪಿ ಪ್ರಯತ್ನಿಸಿದರೂ ಬಾಗಿಲು ತೆರೆಯಲಾಗಲಿಲ್ಲ. ಕೊನೆಗೆ ಉಪ್ಪಳದಿಂದ ಫಯರ್ ಆಫೀಸರ್ ಸಿ.ಪಿ. ರಾಜೇಶ್ ನೇತೃತ್ವದ ಅಗ್ನಿಶಾಮಕದಳ ತಲುಪಿ ಚಿಲಕ ಮುರಿದು ಬಾಗಿಲು ತೆರೆದು ಆತಂಕ ಪರಿಹರಿಸಿದರು.