ಬಂದ್ಯೋಡು ಬಳಿ ಗಾಳಿ ಮರ ರಸ್ತೆಗೆ ಬಿದ್ದು  ಸಾರಿಗೆ ಅಡಚಣೆ: ವಿದ್ಯುತ್ ವಿತರಣೆ ಮೊಟಕು

ಕುಂಬಳೆ:  ಬಂದ್ಯೋಡು ಸಮೀಪದ ಕೊಕ್ಕೆಚ್ಚಾಲ್ ಡಬ್ಬಲ್ ಗೇಟ್ ಸಮೀಪ ಗಾಳಿಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಸೃಷ್ಟಿಯಾಯಿತು.  ಮರ ಬಿದ್ದು ವಿದ್ಯುತ್ ತಂತಿಗಳು ತುಂಡಾದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ವಿದ್ಯುತ್ ವಿತರಣೆಯೂ ಮೊಟಕುಗೊಂಡಿದೆ.  ನಿನ್ನೆ ಸಂಜೆ  ಘಟನೆ ನಡೆದಿದ್ದು, ಮರ ಬಿದ್ದ ಪ್ರದೇಶದ ಎರಡೂ ಭಾಗದಲ್ಲಿ ನಾಗರಿಕರು  ವಾಹನ  ಪ್ರಯಾಣಿಕರಿಗೆ ತಡೆಯೊಡ್ಡಿದ್ದರು.  ಇಂದು ಮುಂಜಾನೆವರೆಗೆ ಮರ ರಸ್ತೆಯಲ್ಲೇ ಬಿದ್ದಿತ್ತು. ಬಳಿಕ ಅಗ್ನಿಶಾಮಕದಳ ತಲುಪಿ ಮರವನ್ನು ತೆರವುಗೊಳಿಸಿದೆ. ಇದರಿಂದ ಮುಂಜಾನೆವರೆಗೆ ವಾಹನಗಳು ಬೇರೆ ರಸ್ತೆಯಲ್ಲಿ ಸಂಚರಿಸಬೇಕಾಗಿಬಂತು. ವಿದ್ಯುತ್ ಸಂಪರ್ಕ ಇನ್ನಷ್ಟೇ ಮರುಸ್ಥಾಪಿಸಬೇಕಾಗಿದೆ.  ನಾಲ್ಕು ದಿನಗಳ ಹಿಂದೆ  ಮೂರು ಗಾಳಿಮರಗಳು ಇಲ್ಲಿ ಬುಡ ಸಹಿತ ಮಗುಚಿ ಬಿದ್ದಿವೆ.  ಈ ವೇಳೆ ಮೂರು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದ್ದವು. ಕಳೆದ ವರ್ಷ ಇದೇ ಪರಿಸರದಲ್ಲಿ ವಾಹನಗಳ ಮೇಲೂ ಗಾಳಿ ಮರಗಳು  ಬಿದ್ದು ಭಾರೀ ನಾಶನಷ್ಟ ಸಂಭವಿಸಿತ್ತು.  ನಿರಂತರ ಅಪಾಯಭೀತಿಯೊಡ್ಡುತ್ತಿರುವ ಮರಗಳನ್ನು ಅಧಿಕಾರಿಗಳು ಸಂರಕ್ಷಿಸುತ್ತಾ ಬರುತ್ತಿದ್ದಾರೆಂದು ನಾಗರಿಕರು ದೂರುತ್ತಿದ್ದಾರೆ. ಬೃಹತ್ ಮರಗಳು ಬುಡ ಸಹಿತ ಬಿದ್ದು ವಿದ್ಯುತ್ ತಂತಿ ಹಾಗೂ ಕಂಬಗಳು ಮುರಿದು ಬಿದ್ದರೂ  ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.  ನಿರಂತರ ಹೆಚ್ಚಿಸುತ್ತಿರುವ ವಿದ್ಯುತ್ ದರ ನೀಡಿ ಜನರು  ಕತ್ತಲೆಯಲ್ಲಿ  ಕುಳಿತುಕೊಂಡರೂ ಸಂಬಂಧಪಟ್ಟ ಇಲಾಖೆ ಮೌನ ಪಾಲಿಸುತ್ತಿದೆ ಎಂದೂ ನಾಗರಿಕರು ಆರೋಪಿಸುತ್ತಿದ್ದಾರೆ.

RELATED NEWS

You cannot copy contents of this page