ಬದರೀನಾಥದಿಂದ ಶಬರಿಮಲೆಗೆ ಕೂಡ್ಲಿನ ಇಬ್ಬರು ಯುವಕರ ತೀರ್ಥಾಟನಾ ಪಾದಯಾತ್ರೆ
ಕಾಸರಗೋಡು: ಭಾರತದ ಆಧ್ಯಾತ್ಮಿಕ ಚೈತನ್ಯವನ್ನು ಸಂರಕ್ಷಿಸಲು ಕಾಸರಗೋಡು ಕೂಡ್ಲು ನಿವಾಸಿಗಳಾದ ಯುವಕರಿಬ್ಬರು ಹಿಮಾಲಯದ ಬದರೀನಾಥ ದೇವಸ್ಥಾನದ ಸನ್ನಿಧಿಯಿಂದ ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ಕೂಡ್ಲು ನಿವಾಸಿಗಳಾದ ಸನತ್ ಕುಮಾರ್ ನಾಯ್ಕ್ ಮತ್ತು ಸಂಪತ್ತು ಕುಮಾರ್ ಶೆಟ್ಟಿ ಎಂಬವರು ಈ ಪಾದಯಾತ್ರೆ ತೀರ್ಥಾಟನೆ ಆರಂಭಿಸಿದ ಯುವಕರಾಗಿದ್ದು, ಇವರು ಜೂನ್ 2ರಂದು ಬದರೀನಾಥ ಕ್ಷೇತ್ರ ಸನ್ನಿಧಿಯಿಂದ ತೀರ್ಥಾಟನೆ ಆರಂಭಿಸಿದ್ದಾರೆ. ಪಯ್ಯನ್ನೂರು ನಿವಾಸಿ ಈಶ್ವರ ಪ್ರಸಾದ್ ಇವರಿಗೆ ಇರುಮುಡಿ ಕಟ್ಟಿ ತೀರ್ಥಾಟನೆಗೆ ಚಾಲನೆ ನೀಡಿದ್ದರು. ಭಾರತದ ಅಖಂಡತೆ ಮತ್ತು ಆಧ್ಯಾತ್ಮಿಕ ಚೈತನ್ಯದ ಪ್ರಚಾರಕ್ಕಾಗಿ ಬದರೀನಾಥದಿಂದ 12 ರಾಜ್ಯಗಳಲ್ಲಾಗಿ 8 ಸಾವಿರ ಕಿಲೋ ಮೀಟರ್ ತೀರ್ಥಾಟನೆಯನ್ನು ಇವರು ಕೈಗೊಂಡಿದ್ದಾರೆ. ಜೂನ್ 2ರಂದು ಆರಂಭಗೊಂಡ ಈ ಕಾಲ್ನಡೆ ತೀರ್ಥಾಟನೆ ಮಕರಜ್ಯೋತಿ ದಿನದಂದು ಇವರು ಶಬರಿಮಲೆಗೆ ತಲುಪಲಿದ್ದಾರೆ. ಇವರು 3200 ಕಿಲೋ ಮೀಟರ್ ದೂರವನ್ನು ಈಗಾಗಲೇ ಕ್ರಮಿಸಿದ್ದಾರೆ. ತೀರ್ಥಾಟನೆ ಆರಂಭಿಸಿದ ಬಳಿಕ ಅವರು ಅಯೋಧ್ಯೆ, ಉಜ್ಜೆಯಿನಿ, ದ್ವಾರಕ ಎಂಬಿಡೆಗಳಿಗೂ ಸಂದರ್ಶಿಸಿದ್ದಾರೆ. ತೀರ್ಥಾಟನೆ ನಡೆಸುತ್ತಿರುವ 39ರ ಹರಯದ ಸನತ್ ಫೋಟೋಗ್ರಾಫರ್ ಹಾಗೂ ಟ್ರಾವಲ್ ಏಜೆಂಟ್ ಆಗಿದ್ದಾರೆ. 44ರ ಹರೆಯದ ಸಂಪತ್ ಕುಶನ್ ಕಾರ್ಮಿಕರಾಗಿದ್ದಾರೆ. ಇವರು ಪ್ರತಿದಿನ ಸರಾಸರಿ ೪೦ ಕಿಲೋ ಮೀಟರ್ ತೀರ್ಥಾಟನೆ ನಡೆಸುತ್ತಿದ್ದಾರೆ.