ಬಳ್ಳೂರಿನಲ್ಲಿ ಕುಟುಂಬಶ್ರೀಯ ಡ್ರಾಗನ್ ಫ್ರೂಟ್ ಕೃಷಿ
ಪೈವಳಿಕೆ: ರಾಜ್ಯದಲ್ಲಿ ಅಷ್ಟಾಗಿ ಪ್ರಚಾರದಲ್ಲಿಲ್ಲದ ಆದರೆ ಅಲ್ಲಲ್ಲಿ ಈಗ ಕೃಷಿ ಆರಂಭಿಸಿರುವ ಡ್ರಾಗನ್ ಫ್ರೂಟ್ಸ್‌ನ್ನು ವ್ಯಾಪಕ ರೀತಿಯಲ್ಲಿ ನಡೆಸಿ ಬಳ್ಳೂರು ಕುಟುಂಬಶ್ರೀ ಗಮನಸೆಳೆದಿದೆ. ಇಲ್ಲಿ ಪ್ರಥಮವಾಗಿ ವೀಣಾ ಭಟ್‌ರ ನೇತೃತ್ವದಲ್ಲಿ ಕೃಷಿ ಆರಂಭಿಸಲಾಗಿದೆ. ಇವರಿಗೆ ಪತಿ ಡಾ| ನಾರಾಯಣ ಭಟ್ ಸಹಕಾರ ನೀಡಿದ್ದಾರೆ. ಈಗ ಕುಟುಂಬಶ್ರೀಯು ಈ ಕೃಷಿಯನ್ನು ಮುನ್ನಡೆಸುತ್ತಿದ್ದು, ಒಂದೂವರೆ ಎಕ್ರೆ ಸ್ಥಳದಲ್ಲಿ ಕೃಷಿ ಕೈಗೊಳ್ಳಲಾಗಿದೆ. ಕುಟುಂಬಶ್ರೀ ಜಿಲ್ಲಾ ಮಿಶನ್ ಸಹಾಯ ನೀಡುತ್ತಿದೆ. ಉಷ್ಣ ಪ್ರದೇಶದಲ್ಲಿ ಬೆಳೆಯುವ ಡ್ರಾಗನ್ ಫ್ರೂಟ್ ಮಲೇಶ್ಯ, ಚೈನಾಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಗಿಡವೊಂದರಲ್ಲಿ ೮ರಿಂದ ೧೦ ಹಣ್ಣುಗಳು ಲಭಿಸುತ್ತಿದೆ. ಕರ್ನಾಟಕ ಬಿಜಾಪುರದಿಂದ ಗಿಡವೊಂದಕ್ಕೆ ೧೦೦ರೂ. ನೀಡಿ ತಂದು ಕೃಷಿ ಮಾಡಲಾಗಿದೆ. ಈಗ ಹಣ್ಣಿನ ಜೊತೆಗೆ ಗಿಡವನ್ನು ಇಲ್ಲಿಂದ ಮಾರಾಟ ಮಾಡಲಾಗುತ್ತಿದೆ. ಹಣ್ಣಿಗೂ, ಗಿಡಕ್ಕೂ ಭಾರೀ ಬೇಡಿಕೆ ಇದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಪ್ರತಿ ವರ್ಷದ ಮೇ ಯಿಂದ ನವಂಬರ್ ವರೆಗಿನ ಸಮಯದಲ್ಲಿ ಹಣ್ಣಾಗುತ್ತದೆ. ಈಗಾಗಲೇ ಸುಮಾರು ೬ ಸಾವಿರ ಗಿಡಗಳನ್ನು ಇಲ್ಲಿಂದ ಮಾರಾಟ ಮಾಡಿರುವುದಾಗಿ ವೀಣಾ ಭಟ್ ತಿಳಿಸಿದ್ದಾರೆ.