ಬಾಯಾರುಪದವಿನ ಟಿಪ್ಪರ್ ಲಾರಿ ಚಾಲಕನ ಸಾವು : ಲಾರಿಯ ಚಕ್ರ ಹರಿದು ಬೆನ್ನೆಲುಬು ಮುರಿದಿರುವುದಾಗಿ ಫಾರೆನ್ಸಿಕ್ ತಜ್ಞರ ವರದಿ
ಉಪ್ಪಳ: ಬಾಯಾರುಪದವು ನಿವಾಸಿ ಟಿಪ್ಪರ್ ಲಾರಿ ಚಾಲಕ ಮುಹಮ್ಮದ್ ಆಶಿಫ್‌ರ ಸಾವಿಗೆ ಸಂಬಂಧಿಸಿ ಫಾರೆನ್ಸಿಕ್ ಸರ್ಜನ್‌ರ ವರದಿ ಲಭಿಸಿದೆ. ಬೆನ್ನೆಲುಬು ಮುರಿದಿರುವುದು ಲಾರಿಯ ಚಕ್ರ ಹರಿದ ಪರಿಣಾಮವೆಂದೂ, ಅದೇ ರೀತಿ ಆಂತರಿಕ ರಕ್ತಸ್ರಾವ ಸಾವಿಗೆ ಕಾರಣವಾಯಿತೆಂದು ವರದಿಯಲ್ಲಿ ತಿಳಿಸಲಾಗಿದೆ. ಲಾರಿಯಿಂದ ಇಳಿಯುತ್ತಿದ್ದಾಗ ಮುಹಮ್ಮದ್ ಆಶಿಫ್ ಕೆಳಕ್ಕೆ ಬಿದ್ದು ಗಾಯವುಂಟಾಗಿರಬಹುದೆಂದು ತನಿಖಾಧಿಕಾರಿಗೆ ಸರ್ಜನ್ ಡಾ| ಶ್ರೀಕಾಂತ್ ನೀಡಿದ ವರದಿಯಲ್ಲಿ ತಿಳಿಸಲಾಗಿದೆ. ಪರಿಯಾರಂ ಮೆಡಿಕಲ್ ಕಾಲೇಜು ಅಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಬೆನ್ನೆಲುಬು ಮುರಿದಿರುವುದೇ ಸಾವಿಗೆ ಕಾರಣವೆಂದು ತಿಳಿದುಬಂದಿತ್ತು. ಹೀಗೆ ಸಂಭವಿಸಿದೆ ಎಂದು ಪರಿಶೀಲಿಸಲು ಪೊಲೀಸ್ ಸರ್ಜನ್ ಘಟನೆ ಸ್ಥಳಕ್ಕೆ ನೇರವಾಗಿ ಭೇಟಿ ನೀಡಿದರು. ಮುಹಮ್ಮದ್ ಆಶಿಫ್ ಕೆಳಕ್ಕೆ ಬಿದ್ದ ಬಳಿಕ ಟಿಪ್ಪರ್ ಲಾರಿ ಮುಂದಕ್ಕೆ ಚಲಿಸಿದ್ದು, ಈ ವೇಳೆ ಚಕ್ರದಡಿ ಸಿಲುಕಿರುವುದೇ ಬೆನ್ನೆಲುಬು ಮುರಿತವುಂಟಾಗಿ ಆಂತರಿಕ ರಕ್ತಸ್ರಾವ ಉಂಟಾಗಲು ಕಾರಣವಾಗಿದೆಯೆಂ ದೂ ವರದಿಯಲ್ಲಿ ತಿಳಿಸಲಾಗಿದೆ. ವರದಿಯಲ್ಲಿರುವ ಮಾಹಿತಿಗಳನ್ನು ತಿಳಿಸಲು ಫಾರೆನ್ಸಿಕ್ ಸರ್ಜನ್ ಕ್ರೈಂ ಬ್ರಾಂಚ್ ಡಿವೈಎಸ್ಪಿ ಡಿ. ಉತ್ತಮ್‌ದಾಸ್ ರನ್ನು ನಿನ್ನೆ ಪರಿಯಾರಂಗೆ ಕರೆಸಿದ್ದರು. ಸರ್ಜನ್ ನೀಡಿದ ವರದಿಯನ್ನು ನ್ಯಾಯಾಲ ಯದಲ್ಲಿ ಸಲ್ಲಿಸುವುದಾಗಿಯೂ ಅದರ ಪ್ರತಿಯನ್ನು ದೂರುಗಾರನಿಗೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜನವರಿ 15ರಂದು ರಾತ್ರಿ ಮುಹಮ್ಮದ್ ಆಶಿಫ್ ಕಾಯರ್ ಕಟ್ಟೆಯಲ್ಲಿ ನಿಲ್ಲಿಸಿದ ಲಾರಿ ಸಮೀಪ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸಾವಿನಲ್ಲಿ ಸಂಶಯ ಹುಟ್ಟಿಕೊಂಡಿದ್ದರಿಂದ ಸಮಗ್ರ ತನಿಖೆ ನಡೆಸಬೇಕೆಂದು ಸಂಬಂಧಿಕರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಜಿಲ್ಲಾ ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು.