ಬಾಯಾರುಪದವು: ಟಿಪ್ಪರ್ ಲಾರಿ ಚಾಲಕನ ನಿಗೂಢ ಸಾವು: ಸಮಗ್ರ ತನಿಖೆಗೆ ಕ್ರಿಯಾ ಸಮಿತಿ ಒತ್ತಾಯ
ಕಾಸರಗೋಡು: ಪೈವಳಿಕೆ ಬಾಯಾರು ಪದವು ನಿವಾಸಿ ಲಾರಿ ಚಾಲಕ ಮುಹಮ್ಮದ್ ಅಶಿಫ್ (29)ರ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಊರವರ ನೇತೃತ್ವದಲ್ಲಿ ಕ್ರಿಯಾ ಸಮಿತಿಗೆ ರೂಪು ನೀಡಲಾಗಿದೆ.
ಅಸಿಫ್‌ರ ಸಾವಿನಲ್ಲಿ ಭಾರೀ ಶಂಕೆ ಉಂಟಾಗಿದೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ. ಆ ಮೂಲಕ ಸಾವಿನ ಹಿಂದಿನ ವಾಸ್ತವತೆಯನ್ನು ಹೊರತರಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ನಸೀರ್ ಕೋರಿಕ್ಕಾರ್, ವಸಂತ ಕುಮಾರ್, ಅಶ್ರಫ್ ಬಡಾಜೆ, ಲೋ ಕೇಶ್ ನೋಂಡಾ, ಅಸೀಸ್ ಕಳಾಯಿ, ಫಾರೂಕ್, ಮುನಾಫ್ ಗೋಳಿತ್ತಡ್ಕ ಮತ್ತು ನೌಫಲ್ ಬಾಯಾರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜನವರಿ ೧೫ರಂದು ಮುಂಜಾನೆ ಕಾಯರ್ಕಟ್ಟೆ ಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಟಿಪ್ಪರ್ ಲಾರಿಯ ಬಳಿ ಅಸಿಫ್ ಮುಹಮ್ಮದ್ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಈ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಅಶಿಫ್‌ರ ಮನೆಯವರು ಮುಖ್ಯಮಂತ್ರಿ ಮತ್ತು ರಾಜ್ಯ ಪೊಲೀಸ್ ಮತ್ತು ನಿರ್ದೇ ಶಕರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಪ್ರಸ್ತುತ ಪ್ರಕರಣದ ತನಿಖೆಯನ್ನು ಜಿಲ್ಲಾ ಕ್ರೈಮ್ ಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು. ಕ್ರೈಮ್ ಬ್ರಾಂಚ್ ಡಿವೈಎಸ್‌ಪಿ ಟಿ. ಉತ್ತಮ್‌ದಾಸ್‌ರ ನೇತೃತ್ವದ ತಂಡ ತನಿಖೆ ಈಗ ಕೈಗೆತ್ತಿಕೊಂಡಿತ್ತು.
ಇದೇ ವೇಳೆ ಫಾರೆನ್ಸಿಕ್ ತಜ್ಞರು ಕೂಡಾ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀ ಲನೆ ನಡೆಸಿದ್ದರು. ಲಾರಿಯ ಚಕ್ರ ದೇಹದ ಮೇಲೆ ಹರಿದು ಬೆನ್ನಿನ ಮೂಳೆ ಮುರಿದು ಆಂತರಿಕ ರಕ್ತಸ್ರಾವವಾಗಿರುವುದೇ ಸಾವಿಗೆ ಕಾರಣವೆಂದು ಫಾರೆನ್ಸಿಕ್ ತಜ್ಞರ ವರದಿಯಲ್ಲಿ ತಿಳಿಸಲಾಗಿತ್ತು.