ಬಿದ್ದು ಸಿಕ್ಕಿದ ಹಣ ಮರಳಿಸಿ ಆಟೋ ಚಾಲಕನ ಪ್ರಾಮಾಣಿಕತೆ: ಸರ್ವರಿಂದ ಮೆಚ್ಚುಗೆ

ಕುಂಬಳೆ: ಆಟೋ ರಿಕ್ಷಾದಲ್ಲಿ ಬಿದ್ದು ಸಿಕ್ಕಿದ ಹಣವನ್ನು ಮರಳಿ ನೀಡಿ ಚಾಲಕ ಮಾದರಿಯಾದ ಘಟನೆ ನಡೆದಿದೆ. ಕುಂಬಳೆ ಆಟೋ ಸ್ಟಾಂಡ್‌ನ ಚಾಲಕ ಕುಂಟಂಗೇರಡ್ಕದ ಯೂಸಫ್ ಮೊನ್ನೆ ರಾತ್ರಿ  ಬಾಡೂರಿಗೆ ಬಾಡಿಗೆಗೆ  ತೆರಳಿದ್ದಾರೆ. ಪ್ರಯಾಣಿಕರನ್ನು ಅಲ್ಲಿ ಇಳಿಸಿದ ಬಳಿಕ ಕುಂಬಳೆಗೆ ಮರಳಿ ಅಂಗಡಿಯಿಂದ ಹಾಲು ಖರೀದಿಸಿ ರಿಕ್ಷಾದೊಳಗೆ ಇರಿಸುತ್ತಿದ್ದಂತೆ ಅದರಲ್ಲಿ ೫೦೦ ರೂ.ಗಳ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಅದನ್ನು ಹೆಕ್ಕಿ ಎಣಿಸಿದಾಗ ೭೦೦೦ ರೂಪಾಯಿ ಇತ್ತೆನ್ನಲಾಗಿದೆ.  ಯೂಸಫ್ ಕೂಡಲೇ ಕುಂಬಳೆ ಪೊಲೀಸ್ ಠಾಣೆಗೆ ತೆರಳಿ ಹಣವನ್ನು ಎಎಸ್‌ಐ ಪ್ರಕಾಶ್‌ರಿಗೆ ನೀಡಿ ವಿಷಯ ತಿಳಿಸಿದರು. ಪೊಲೀಸರು ನಡೆಸಿದ  ಪರಿಶೀಲನೆಯಲ್ಲಿ ಹಣ ಬಾಡೂರು ನಿವಾಸಿ ದಿನೇಶ್ ಬಿ.ಪಿ ಎಂಬವರದ್ದೆಂದು ತಿಳಿದುಬಂತು. ಬಳಿಕ ಅವರನ್ನು ಠಾಣೆಗೆ ಕರೆಸಿ  ಯೂಸಫ್‌ರ ಮೂಲಕ ಹಸ್ತಾಂತರಿಸಲಾಯಿತು. ಆಟೋ ಚಾಲಕ ಯೂಸಫ್‌ರ ಪ್ರಾಮಾಣಿಕತೆಗೆ ಪೊಲೀಸ್ ಹಾಗೂ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You cannot copy contents of this page