ಬಿರುಗಾಳಿಗೆ ಮೀನುಗಾರಿಕಾ ದೋಣಿ ಹಾನಿ
ಕಾಸರಗೋಡು: ಭಾರೀ ಬಿರುಗಾಳಿಗೆ ಮೀನುಗಾರಿಕಾ ದೋಣಿಯೊಂದು ಹಾನಿಗೊಂಡಿದೆ. ಕಾಸರಗೋಡು ಕಸಬಾ ಕಡಪ್ಪುರದ ಮತ್ಸ್ಯಫೆಡ್ ಒಕ್ಕೂಟಕ್ಕೆ ಸೇರಿದ ಅಮ್ಮಪಾಯಿ ಎಂಬ ಹೆಸರಿನ ಫೈಬರ್ಗೆ ಬಿರುಗಾಳಿಯಿಂದ ಹಾನಿಗೊಂಡಿದ್ದು, ಇದರಿಂದ 2೦ ಲಕ್ಷ ರೂ.ನಷ್ಟು ನಷ್ಟ ಉಂಟಾಗಿರುವುದಾಗಿ ಈ ಒಕ್ಕೂಟದ ಸದಸ್ಯ ಕೆ.ಎನ್. ಉಮೇಶನ್ ತಿಳಿಸಿದ್ದಾರೆ.
ಈ ಬೋಟನ್ನು ಕಾಸರಗೋಡು ಬಂದರಿನ ಅಳಿವೆಬಾಗಿಲ ಬಳಿ ಕಟ್ಟಿರಿಸಲಾಗಿತ್ತು. ಮೀನುಗಾರಿಕೆಗೆಂದು ಬೆಳಿಗ್ಗೆ ಬೆಸ್ತರು ಅಲ್ಲಿಗೆ ತಲುಪಿದಾಗಲಷ್ಟೇ ಅದು ಹಾನಿಗೊಂಡಿರುವ ವಿಷಯ ಅವರ ಗಮನಕ್ಕೆ ಬಂದಿದೆ. ಈ ದೋಣಿಯನ್ನು ಸುಮಾರು ೩೯ ಬೆಸ್ತರು ತಮ್ಮ ಉಪಜೀವನ ಮಾರ್ಗಕ್ಕಾಗಿ ಆಶ್ರಯಿಸಿಕೊಂಡಿದ್ದರೆಂದೂ ಉಮೇಶನ್ ತಿಳಿಸಿದ್ದಾರೆ.