ಬೆಳ್ಳೂರಿನಲ್ಲಿ ಕುಡಿಯುವ ನೀರು, ವಿದ್ಯುತ್ ವೋಲ್ಟೇಜ್ ಸಮಸ್ಯೆ: ವನ್ಯಮೃಗಗಳ ಹಾವಳಿಯಿಂದ ಜನತೆಗೆ ಆತಂಕ
ಮುಳ್ಳೇರಿಯ: ಬೇಸಿಗೆ ತೀವ್ರಗೊಳ್ಳುತ್ತಿರುವಂತೆ ಮಲೆನಾಡ ಪ್ರದೇಶವಾದ ಬೆಳ್ಳೂರಿನಲ್ಲಿ ಕುಡಿಯುವ ನೀರಿನ ಕ್ಷಾಮ ತೀವ್ರಗೊಂಡಿದೆ. ಪಂಚಾಯತ್‌ನ ಮೂರನೇ ವಾರ್ಡ್ ಕುಳದಪಾರೆ ಯಲ್ಲಿ ಕುಡಿಯುವ ನೀರಿನ ಕ್ಷಾಮ ತೀವ್ರಗೊಂಡಿರುವುದಾಗಿ ಪಂಚಾಯತ್‌ನ ಎಸ್‌ಟಿ ಕಾಲನಿಗಳನ್ನು ನೇರವಾಗಿ ಸಂದರ್ಶಿಸಿದ ಕೇರಳ ಕರ್ಷಕ ತೊಯಿಲಾಳಿ ಯೂನಿಯನ್ ಪ್ರತಿನಿಧಿ ಸಂಘ ಪಂಚಾಯತ್ ಸೆಕ್ರೆಟರಿಗೆ ತಿಳಿಸಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ವೋಲ್ಟೇಜ್ ಕ್ಷಾಮ, ವನ್ಯಜೀವಿಗಳ ಉಪಟಳ ಅಸಹನೀಯವಾಗಿ ಮುಂದುವರಿದಿದೆಯೆಂದು ವರದಿಯಲ್ಲಿ ತಿಳಿಸಲಾಗಿದೆ. ಸಂದಿಗ್ಧತೆಗಳ ಮಧ್ಯೆಯೂ ನಡೆಸಿದ ಕೃಷಿ ಕಟಾವಿಗೆ ಸಿದ್ಧವಾಗಿರುವಾಗಲೇ ಕಾಡುಕೋಣ, ಕಾಡುಹಂದಿ ಸಹಿತ ವನ್ಯಜೀವಿಗಳು ನಾಶಪಡಿಸುತ್ತಿರುವುದಾಗಿ ತಂಡ ಆರೋಪಿಸಿದೆ.
ಕುಡಿಯುವ ನೀರು ವಿದ್ಯುತ್ ಯಾವುದೇ ಅಡಚಣೆಯಿಲ್ಲದೆ ಲಭಿಸಲು ಹಾಗೂ ವನ್ಯಮೃಗಗಳಿಂದ ಜನರು ಹಾಗೂ ಕೃಷಿಗೆ ಸಂರಕ್ಷಣೆ ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಕರ್ಷಕ ತೊಯಿಲಾಳಿ ಯೂನಿಯನ್ ಒತ್ತಾಯಿಸಿದೆ. ಈ ಬಗ್ಗೆ ಮನವಿಯನ್ನು ಯೂನಿಯನ್ ನೇತಾರ ಶಶಿಧರ ಗೋಳಿಕಟ್ಟೆ ಪಂಚಾಯತ್ ಸೆಕ್ರೆಟರಿಗೆ ಸಲ್ಲಿಸಿದರು.