ಬೇಡಿಕೆಗಳಿಗಿಲ್ಲ ಬೆಲೆ: ಕಾಸರಗೋಡಿನಲ್ಲಿ ‘ಏಮ್ಸ್’ ಆಸ್ಪತ್ರೆ ಪರಿಗಣನೆಯಲ್ಲಿಲ್ಲ- ಮುಖ್ಯಮಂತ್ರಿ

ಕಾಸರಗೋಡು: ಕೇಂದ್ರ ಸರಕಾರದ ಉನ್ನತ ಚಿಕಿತ್ಸಾ ಕೇಂದ್ರವಾದ ಏಮ್ಸ್ ಆಸ್ಪತ್ರೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಸ್ಥಾಪಿಸುವ ವಿಷಯ ರಾಜ್ಯ ಸರಕಾರದ ಪರಿಗಣನೆಯಲ್ಲಿ ಇಲ್ಲವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸುವಂತೆ ಶಾಸಕ ಎನ್.ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ ಆಗ್ರಹಿಸಿ ದಾಗ, ಅದಕ್ಕೆ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಏಮ್ಸ್ ಆಸ್ಪತ್ರೆ ಕಾಸರಗೋಡಿನಲ್ಲಿ ಸ್ಥಾಪಿಸುವ ವಿಷಯ ಸರಕಾರದ ಪರಿಗಣನೆಯಲ್ಲಿ ಇಲ್ಲ. ಕಲ್ಲಿಕೋಟೆ ಜಿಲ್ಲೆಯ ಕಿನಾಲೂರಿನಲ್ಲಿರುವ ಕೇರಳ ಸ್ಟೇಟ್  ಇಂಡಸ್ಟ್ರಿಯಲ್ ಕಾರ್ಪರೇ ಶನ್‌ನ ಮಾಲಕತ್ವದಲ್ಲಿರುವ ಭೂಮಿಯಲ್ಲಿ ‘ಏಮ್ಸ್’ ಆಸ್ಪತ್ರೆ ಸ್ಥಾಪಿಸುವ ಅಗತ್ಯದ ಕ್ರಮಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ಕುರಿತಾದ ಶಿಫಾರಸ್ಸನ್ನು 2017ರಲ್ಲೇ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಎಂದು  ಮುಖ್ಯಮಂತ್ರಿ ತಿಳಿಸಿದ್ದಾರೆ. ಇದು ಮಾತ್ರವಲ್ಲದೆ ಕಿನಾಲೂರಿನಲ್ಲಿ ಈ ಯೋಜನೆಗೆ  ಅಗತ್ಯದ ಜಮೀನು ಲಭಿಸಲಿರುವ ಸಾಧ್ಯತಾ ಅಧ್ಯಯನ ನಡೆಸಲು ತಜ್ಞರ ತಂಡವೊಂದನ್ನು ಕಳುಹಿಸಿಕೊಡುವಂತೆ ಆಗ್ರಹಿಸಿ 2022ರಲ್ಲಿ ರಾಜ್ಯ ಆರೋಗ್ಯ ಇಲಾ ಖೆಯ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದಿದ್ದರು. ಆದರೆ ಆ ಬೇಡಿಕೆಯನ್ನು ಕೇಂದ್ರ ಸರಕಾರ ಈ ತನಕ ಪರಿಗಣಿಸಿಲ್ಲವೆಂದೂ ಮುಖ್ಯಮಂತ್ರಿ ಹೇಳಿದ್ದಾರೆ.

ಕಲ್ಲಿಕೋಟೆ ಜಿಲ್ಲೆ ವೈದ್ಯಕೀಯ ಕಾಲೇಜು ಆಸ್ಪತ್ರೆಯೂ ಸೇರಿದಂತೆ ಹಲವು ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೌಕರ್ಯಗಳಿರುವ  ಜಿಲ್ಲೆಯೂ ಆಗಿದೆ. ಆದರೆ ಸರಕಾರ ಸದಾ ಕಡೆಗಣಿಸುತ್ತಾ ಬಂದಿರುವ ಜಿಲ್ಲೆಯಾಗಿದೆ ಕಾಸರಗೋಡು. ವಿಶೇಷವಾಗಿ ಎಂಡೋಸಲ್ಫಾನ್ ಸಂತ್ರಸ್ತ ಜಿಲ್ಲೆಯೂ ಆಗಿದೆ ಇದು. ಜಿಲ್ಲೆಯಲ್ಲಿ ಅದಾವುದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೂ ಇಲ್ಲ. ಅದರಿಂದಾಗಿ ಉನ್ನತ ಮಟ್ಟದ ಚಿಕಿತ್ಸೆ ಗಾಗಿ ಮಂಗಳೂರಿನ ಆಸ್ಪತ್ರೆಗಳನ್ನು ಕಾಸ ರಗೋಡಿನವರು ಆಶ್ರಯಿಸಬೇಕಾಗುತ್ತಿದೆ.

ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣ ಈಗಲೂ ಆಮೆ ನಡಿಗೆಯಲ್ಲಿ ಸಾಗುತ್ತಿದೆ. ಈ ಆಸ್ಪತ್ರೆ ಈಗ ಪ್ರಾಥಮಿಕ ಆರೋಗ್ಯ ಕೇಂದ್ರ ಎಂಬ ರೀತಿಯಲ್ಲಿ ಮಾತ್ರವೇ ಕಾರ್ಯವೆಸಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸುವಂತೆ ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ ಹಾಗೂ ವಿವಿಧ ಸಂಘ-ಸಂಘಟನೆಗಳು ವರ್ಷಗಳಿಂದಲೇ ಆಗ್ರಹಿಸಿ ಅದಕ್ಕಾಗಿ ಹೋರಾಟ ನಡೆಸುತ್ತಾ ಬಂದಿದೆ. ಆದರೆ ಅದನ್ನೆಲ್ಲಾ ಕಂಡೂ ಕಾಣದಂತೆ ವರ್ತಿಸಿ ಏಮ್ಸ್ ಆಸ್ಪತ್ರೆ ಸ್ಥಾಪಿಸುವ ವಿಷಯದಲ್ಲೂ ಕಾಸರಗೋಡನ್ನು ಅವಗಣಿಸುತ್ತಿರುವ ರಾಜ್ಯ ಸರಕಾರದ ನಿಲುವು ಜಿಲ್ಲೆಯ ಜನರಿಂದ ಭಾರೀ ಪ್ರತಿಭಟನೆಗೂ ದಾರಿ ಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *

You cannot copy content of this page